

ಶಿವಮೊಗ್ಗ: ಹಿಂಗಾರು ಮಳೆ ಅಬ್ಬರಕ್ಕೆ ಜಿಲ್ಲೆಯ ಜನ ತತ್ತರಿಸಿದ್ದಾರೆ. ಶನಿವಾರ ತಡರಾತ್ರಿ ಹಾಗೂ ಭಾನುವಾರ ಸುರಿದ ಭಾರಿ ಮಳೆಗೆ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ. ಏಳು ಮನೆಗಳು ಸಂಪೂರ್ಣ ನೆಲಕ್ಕುರುಳಿವೆ. ತಗ್ಗು ಪ್ರದೇಶದ ಅನೇಕ ಬಡಾವಣೆಗಳು ಕೆಲವು ತಾಸಿನವರೆಗೆ ಜಲಾವೃತವಾಗಿದ್ದವು.
ಹಲವೆಡೆ ಚರಂಡಿ, ರಾಜಕಾಲುವೆಗಳ ನೀರು ಉಕ್ಕಿ ಹರಿದು ರಸ್ತೆ ಹಾಗೂ ಮನೆಗಳಿಗೆ ನುಗ್ಗಿದೆ. ಬಡಾವಣೆ, ರಸ್ತೆಗಳು ಜಲಾವೃತಗೊಂಡ, ಮನೆಗಳಿಗೆ ನೀರು ನುಗ್ಗಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು. ನಾಗರಿಕರು ಈ ಮೂಲಕ ಆಡಳಿತ ಯಂತ್ರದ ಗಮನಸೆಳೆಯುವ ಪ್ರಯತ್ನ ಮಾಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿಯಲ್ಲಿ ಅನೇಕ ಕಡೆಗಳಲ್ಲಿ ಚರಂಡಿಗಳನ್ನು ಕಿರಿದಾಗಿ ನಿರ್ಮಿಸಲಾಗಿದೆ. ಈ ಕಾರಣದಿಂದ ನೀರು ಉಕ್ಕಿ ಹರಿಯುತ್ತಿದೆ. ರಾಜಕಾಲುವೆ ಒತ್ತುವರಿ ಆಗಿರುವುದರಿಂದ ಮಳೆ ನೀರು ಜನವಸತಿ ಪ್ರದೇಶಕ್ಕೆ ನುಗ್ಗುತ್ತಿದೆ. ಈ ಬಗ್ಗೆ ಪಾಲಿಕೆ ಗಮನಹರಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.
ಬಾಪೂಜಿ ನಗರ, ಟ್ಯಾಂಕ್ ಮೊಹಲ್ಲಾ, ಎಲ್‌ಬಿಎಸ್ ನಗರ, ಗೋಪಾಲ ಗೌಡ ಬಡಾವಣೆ ಸಿ ಬ್ಲಾಕ್, ಅಣ್ಣಾ ನಗರ, ಹೊಸಮನೆ, ಅಂಗಳಯ್ಯನ ಕೆರೆ, ಕಾಶೀಪುರ, ಹೇಮಶ್ರೀ ಬಡಾವಣೆ, ಇಮಾಂಬಾಡಾ, ಖಾಜಿ ನಗರ, ಟಿಪ್ಪುನಗರ, ಆರ್‌ಎಂಎಲ್ ನಗರ, ಮಂಜುನಾಥ ಬಡಾವಣೆ ಸೇರಿ ಹಲವು ಬಡಾವಣೆ ಜನರಿಗೆ ಭಾನುವಾರ ಮಳೆ ಶಾಕ್ ನೀಡಿದೆ. ವಾರಾಂತ್ಯದ ರಜೆ ಸಂಭ್ರಮದಲ್ಲಿದ್ದ ಜನರು ಬೆಳ್ಳಂಬೆಳಗ್ಗೆಯೇ ಮನೆಗೆ ನುಗ್ಗಿದ ನೀರನ್ನು ಹೊರಹಾಕಲು ಪರದಾಡಬೇಕಾಯಿತು.