ಕ್ಷೇತ್ರದ ಅಭಿವೃದ್ಧಿಗೆ ಜನರು ಕೈ ಜೋಡಿಸಿ

29M.D.R.3
ಮದ್ದೂರು ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಪರಿಶೀಲನೆ ನಡೆಸಿದ ಶಾಸಕ ಕೆ.ಎಂ.ಉದಯ್, ಕೋಕಿಲಾ ಅರುಣ್, ಟಿ.ಆರ್.ಪ್ರಸನ್ನಕುಮಾರ್, ಸಿದ್ದರಾಜು, ನಾಗರಾಜು ಇದ್ದರು.
Published on

ಮದ್ದೂರು: ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಈಗಾಗಲೇ ಹತ್ತು ಹಲವು ಕಾಮಗಾರಿಗಳು ಚಾಲ್ತಿಯಲ್ಲಿದ್ದು ಅನಧಿಕೃತ ಒತ್ತುವರಿ ತೆರವು ಸೇರಿದಂತೆ ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು ಕ್ಷೇತ್ರದ ವ್ಯಾಪ್ತಿಯ ಅಭಿವೃದ್ಧಿಗೆ ಸ್ಥಳೀಯರು ಕೈಜೋಡಿಸುವಂತೆ ಶಾಸಕ ಕೆ.ಎಂ.ಉದಯ್ ಕೋರಿದರು.

ಪಟ್ಟಣದ ವಾರ್ಡ್ ನಂ. 21ರ ಶ್ರೀ ಮದ್ದೂರಮ್ಮ ದೇವಾಲಯ ಬಳಿಯ ರಸ್ತೆ ಮತ್ತು ಮಳೆ ನೀರು ಚರಂಡಿ ಕಾಮಗಾರಿಯ ಪ್ರಗತಿಯನ್ನು ಭಾನುವಾರ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು, ಪಟ್ಟಣದ ವಿವಿಧೆಡೆ ಅನಧಿಕೃತ ಒತ್ತುವರಿಗಳು ಸಾಕಷ್ಟಿದ್ದು ಸಾರ್ವಜನಿಕರ ಹಿತದೃಷ್ಟಿಯಿಂದ ಯಾವುದೇ ಮುಲಾಜಿಗೂ ಒಳಪಡದೆ ತೆರವು ನಡೆಸಿ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು.

ಮದ್ದೂರಮ್ಮ ದೇವಾಲಯ ಆಸುಪಾಸಿನಲ್ಲಿ ಈ ಹಿಂದೆ ನಿರ್ಮಿಸಿರುವ ಮನೆಗಳ ವ್ಯಾಪ್ತಿಯ ರಸ್ತೆ ಕುರಿತಾಗಿ ಇದ್ದ ಅಡಚಣೆ ನಿವಾರಿಸುವ ಕಾರ್ಯ ಮುಕ್ತಾಯವಾಗಿದ್ದು ಒಂದಿಬ್ಬರು ವ್ಯಕ್ತಿಗಳ ಹಿತಕ್ಕಾಗಿ ಬಡಾವಣೆಯ ನಿವಾಸಿಗಳಿಗೆ ಮತ್ತು ಕಾಮಗಾರಿಗಳಿಗೆ ತೊಡಕಾಗದಂತೆ ಸ್ಥಳ ಪರಿಶೀಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ತಿಳಿಸಿದರು.

ಈ ಹಿಂದೆ ಬಿಡುಗಡೆಯಾಗಿದ್ದ ಐದು ಕೋಟಿ ರೂ. ಜತೆಗೆ ಹೆಚ್ಚುವರಿ ಎರಡು ಕೋಟಿ ರೂ. ವೆಚ್ಚದ ಕಾಂಕ್ರೀಟ್ ರಸ್ತೆ, ಮಳೆನೀರು ಚರಂಡಿ, ಅಗತ್ಯವಿರುವೆಡೆ ಸಂಪರ್ಕ ರಸ್ತೆಗಳಿಗೆ ಡಕ್ ನಿರ್ಮಾಣ ಸಂಬಂಧ ಸ್ಥಳೀಯ ಪುರಸಭಾ ಸದಸ್ಯೆ ಬಿ.ಸಿ.ಸರ್ವಮಂಗಳಾ ಮತ್ತು ಸ್ಥಳೀಯ ನಿವಾಸಿಗಳ ಮನವಿ ಪುರಸ್ಕರಿಸಿ ಈಗಾಗಲೇ ಕಾಮಗಾರಿ ಆರಂಭಿಸಿರುವುದಾಗಿ ಹೇಳಿದರು.

ಈ ಭಾಗಕ್ಕೆ ಸೇರಿದ ಭೈರನ್ ನಾಲೆ ಮತ್ತು ನಾಲಾ ಬದಿಯ ಸರ್ವೀಸ್ ರಸ್ತೆ ಆಧುನೀಕರಣ ಸಂಬಂಧ 48 ಕೋಟಿ ರೂ. ಮಂಜೂರಾಗಿದ್ದು ಸದರಿ ಕಾಮಗಾರಿಯಡಿ ಭೈರನ್ ನಾಲೆ, ವೈದ್ಯನಾಥಪುರ ನಾಲೆ ಉನ್ನತೀಕರಣ ಹಾಗೂ ಎರಡು ಕಾಲುವೆಗಳ ರಸ್ತೆ ಅಭಿವೃದ್ಧಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಚಾಲ್ತಿಯಲ್ಲಿರುವುದಾಗಿ ತಿಳಿಸಿದರು.

ಪುರಸಭೆ ಅಧ್ಯಕ್ಷೆ ಕೋಕಿಲಾ, ಉಪಾಧ್ಯಕ್ಷ ಟಿ.ಆರ್.ಪ್ರಸನ್ನಕುಮಾರ್, ಸದಸ್ಯ ಸಿದ್ದರಾಜು, ನೀರಾವರಿ ನಿಗಮದ ಎಇಇ ನಾಗರಾಜು, ಮುಖಂಡರಾದ ಎಂ.ಎಸ್.ಸಂತೋಷ್‌ಗೌಡ, ರಾಜೇಶ್, ಸತ್ಯಪ್ರಕಾಶ್, ಪುಟ್ಟಲಿಂಗಪ್ಪ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮನ್‌ಮುಲ್ ನಿರ್ದೇಶಕ ಹರೀಶ್‌ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net