ಜನಸ್ನೇಹಿ ಪೊಲೀಸ್ ವ್ಯವಸ್ಥೆ: ಹೊಸ ಪ್ರಯತ್ನ

police
ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಸಿಪಿಐ ಸತ್ಯನಾರಾಯಣ ಅವರು ವಂಚನೆಗೊಳಗಾದವರು ಹಾಗೂ ದೂರುದಾರರ ಸಭೆ ನಡೆಸಿದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ವಿವಿಧ ಠಾಣೆಗಳಲ್ಲಿ ಪಿಎಸ್‌ಐ ಹಾಗೂ ಎಸ್‌ಎ ಹಂತದಲ್ಲಿ ದೂರುದಾರರು ಹಾಗೂ ವಿವಿಧ ವಂಚನೆಗಳಿಂದ ನೊಂದವರ ಸಭೆ ನಡೆಸಲು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮುಂದಾಗಿದ್ದಾರೆ. ಆರಂಭಿಕ ಹಂತವಾಗಿ ಜಿಲ್ಲೆಯ ವಿವಿಧೆಡೆ ನಡೆದ ಸಭೆಯಲ್ಲಿ 185 ಪ್ರಕರಣಗಳಿಗೆ ಸಂಬಂಧಿಸಿ 350 ಜನರು ಪಾಲ್ಗೊಂಡಿದ್ದರು.

ಈ ವೇಳೆ ದೂರುದಾರರಿಗೆ ಅವರ ಪ್ರಕರಣಗಳ ಕುರಿತು ವಸ್ತುಸ್ಥಿತಿ, ತನಿಖೆ ಹಂತಗಳ ಬಗ್ಗೆ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು. ದೂರುದಾರರ ಅಹವಾಲುಗಳನ್ನು ಆಲಿಸಲಾಯಿತು. ವಿವಿಧ ವಂಚನೆಗಳಿಗೆ ಒಳಗಾದವರಿಂದ ಮಾಹಿತಿ ಪಡೆದು ನ್ಯಾಯ ಒದಗಿಸುವ ಭರವಸೆ ನೀಡಲಾಯಿತು.
ಕೆಲ ಪ್ರಕರಣಗಳಲ್ಲಿ ದೂರುಗಳು ಸಲ್ಲಿಕೆಯಾದ ವೇಳೆಯೇ ಪ್ರತಿದೂರು ಸಲ್ಲಿಕೆಯಾಗುತ್ತಿರುವುದರಿಂದ ಪಾರದರ್ಶಕ ತನಿಖೆ ನಡೆಸಲು ಕೊಂಚ ತಡವಾಗುತ್ತಿದೆ. ಆದರೆ ನಾವು ನಡೆಸಿದ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದರು.
ದೂರು ನೀಡಿದ ಸಂದರ್ಭದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸುವುದು ತನಿಖಾಧಿಕಾರಿ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಎಲ್ಲ ಪ್ರಕರಣದಲ್ಲೂ ಬಂಧಿಸಲೇ ಬೇಕೆಂದಿಲ್ಲ. ದೂರನ್ನು ಆಧರಿಸಿ ಎಫ್‌ಐಆರ್ ಹಾಕಲಾಗುತ್ತದೆ.
ತನಿಖೆಯಲ್ಲಿನ ಅಂಶವನ್ನು ಕೋರ್ಟ್‌ಗೆ ತಿಳಿಸಿದ ನಂತರ ಅಲ್ಲಿಂದ ಬಂಧನ ನಿರ್ದೇಶನವಿದ್ದರೆ ಆರೋಪಿಯನ್ನು ಬಂಧಿಸಲಾಗುತ್ತದೆ. ಒಂದು ವೇಳೆ ತನಿಖೆಯಲ್ಲಿ ಲೋಪ ಕಂಡುಬಂದರೆ ತನಿಖಾಧಿಕಾರಿ ಮೇಲೂ ಶಿಸ್ತುಕ್ರಮ ಜರುಗಿಸಲು ಅವಕಾಶವಿದೆ ಎಂದು ಸಾರ್ವಜನಿಕರಿಗೆ ವಿವರಣೆ ನೀಡಲಾಯಿತು.
ಪ್ರಕರಣ ದಾಖಲಿಸಿದ ಬಳಿಕ ಅಂತಿಮ ವರದಿ ಸಲ್ಲಿಕೆ ವಿಳಂಬವಾಗುತ್ತಿದೆ ಎಂಬ ಸಾರ್ವಜನಿಕರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿಗಳು, ಅಂತಿಮ ವರದಿ ಸಲ್ಲಿಕೆಗೆ ಕಾಲಮಿತಿ ನಿಗದಿಪಡಿಸಲಾಗಿದೆ. ಅಷ್ಟರೊಳಗೆ ವರದಿ ಸಲ್ಲಿಸುವುದು ಅಗತ್ಯ. ಮಾರಣಾಂತಿಕ ಅಪಘಾತಗಳಲ್ಲಿ ಪರಿಹಾರಕ್ಕೆ ಸಂಬಂಧಿಸಿ ದಾಖಲೆಗಳನ್ನು ದೂರುದಾರರು ಕೋರಿದರೆ ನೀಡುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಸೈಬರ್ ಅಪರಾಧ ಪ್ರಕರಣಗಳಲ್ಲಿ ವಂಚನೆಗೊಳಗಾದವರು 1930 ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿರುತ್ತಾರೆ. ಈ ವೇಳೆ ಅವರ ಖಾತೆಗಳ ವ್ಯವಹಾರ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ತಡೆಯೊಡ್ಡಲಾಗುತ್ತದೆ. ಖಾತೆಯಲ್ಲಿ ಹಣವನ್ನು ದೂರುದಾರರು ಮರಳಿ ಪಡೆಯಲು ಸಂಬಂಧಪಟ್ಟ ಠಾಣೆಯಿಂದ ಅಧಿಕೃತ ಪತ್ರ ಕೊಂಡೊಯ್ದು ಬ್ಯಾಂಕ್‌ಗೆ ನೀಡುವಂತೆ ಪೊಲೀಸರು ಮಾಹಿತಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net