ಪೋಡಿ ಸಿಗದೆ ಹಿಡಿಶಾಪ: ಭ್ರಷ್ಟ ಅಧಿಕಾರಿಗಳಿಂದ ರೈತರಿಗೆ ಪ್ರಯಾಸ; ಲಂಚ ಕೊಟ್ಟರಷ್ಟೇ ಕೆಲಸ..

Front
Published on

| ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು

ಕೃಷಿಯತ್ತ ಯುವಜನರನ್ನು ಸೆಳೆಯಲು ರಾಜ್ಯ ಸರ್ಕಾರ ಹತ್ತಾರು ಕಾರ್ಯಕ್ರಮ ಹಾಗೂ ಯೋಜನೆಗಳನ್ನು ರೂಪಿಸುತ್ತಿದ್ದರೂ ಆಡಳಿತಾಂಗದಲ್ಲಿ ಬೇರುಬಿಟ್ಟಿರುವ ಭ್ರಷ್ಟಾಚಾರದಿಂದಾಗಿ ಭೂಮಿಯನ್ನು ನಂಬಿಕೊಂಡವರು ಭ್ರಮನಿರಸನಗೊಳ್ಳುವಂತಾಗಿದೆ. ಗೋಮಾಳದಲ್ಲಿ ಮಂಜೂರಾಗಿರುವ ಭೂಮಿಗೆ ದರಖಾಸ್ತು ಪೋಡಿ ನೀಡುವುದಕ್ಕೆ ಅಧಿಕಾರಿಗಳು ಲಂಚಕ್ಕೆ ಕೈಯೊಡ್ಡುತ್ತಿರುವುದು ವ್ಯವಸ್ಥೆಯ ದುರವಸ್ಥೆಗೆ ಹೊಸ ನಿದರ್ಶನ. ರಾಜ್ಯ ಸರ್ಕಾರ ರೈತರಿಗೆ ಕೃಷಿ ಮಾಡಲು ಗೋಮಾಳದಲ್ಲಿ ಭೂಮಿ ಮಂಜೂರು ಮಾಡಿದರೂ ಭೂಮಿಗೆ ದರಖಾಸ್ತು ಪೋಡಿ ಸಿಗುತ್ತಿಲ್ಲ. ಸರ್ಕಾರದ ಸುತ್ತೋಲೆ, ಆದೇಶ, ಪೋಡಿ ಅದಾಲತ್​ಗಳು ನಾಮ್ ಕೆ ವಾಸ್ತೆ ಎನ್ನುವಂತಾಗಿದೆ. ಜಮೀನಿನ ಮಾರುಕಟ್ಟೆ ಮೌಲ್ಯದ ಆಧಾರದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಲಂಚ ನಿಗದಿ ಮಾಡುತ್ತಿದ್ದಾರೆ. ಲಂಚ ಕೊಡದಿದ್ದರೆ ಸಂಬಂಧಪಟ್ಟ ಭೂದಾಖಲೆಗಳೇ ಕಣ್ಮರೆಯಾಗುತ್ತಿವೆ. ಸಾಲ, ಮಾರಾಟ, ವಿಭಾಗ ಪತ್ರ ಮುಂತಾದ ಕಾರ್ಯಕ್ಕೆ ಭೂಮಿಯ ಮೇಲೆ ಅಧಿಕಾರವಿಲ್ಲದ ಸ್ಥಿತಿಯಲ್ಲಿ ರೈತರಿದ್ದಾರೆ.

ಹತ್ತಾರು ವರ್ಷಗಳಿಂದ ಗೋಮಾಳದಲ್ಲಿ ಕೃಷಿ ಮಾಡಿಕೊಂಡು ಬಂದಿರುವ ರೈತರಿಗೆ ಸರ್ಕಾರ ಜಮೀನು ಮಂಜೂರು ಮಾಡುತ್ತಿದೆ. ಇದರಂತೆ ರೈತರು ಸರ್ಕಾರದ ಭೂಮಂಜೂರು ಪ್ರಮಾಣ ಪತ್ರ ಮತ್ತು ರೈತ ಸ್ವಾಧೀನದಲ್ಲಿ ಇರುವ ಜಾಗವನ್ನು ಅಳತೆ ಮಾಡಿ ಪೋಡಿ ಮಾಡಿ ನಕ್ಷೆ ತಯಾರಿಸಿ ಪ್ರತ್ಯೇಕ ಪಹಣಿ ನಂಬರ್ ಕೊಟ್ಟು ಅಧಿಕೃತ ಮಾಡಿಕೊಳ್ಳಬೇಕು. ಆದರೆ ಅಧಿಕಾರಿಗಳು ಈ ಕಾರ್ಯಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಅದರಲ್ಲಿಯೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಸೇರಿ ಮಾರುಕಟ್ಟೆ ಮೌಲ್ಯ ಹೆಚ್ಚಿರುವ ಜಿಲ್ಲಾ ಕೇಂದ್ರಗಳ ಸುತ್ತಮುತ್ತ ಕಂದಾಯ ಅಧಿಕಾರಿಗಳು ದರಖಾಸ್ತು ಪೋಡಿ ಮಾಡಿಕೊಡಲು ಲಂಚದ ಮೊತ್ತ ಹೆಚ್ಚಿಸುತ್ತಿದ್ದಾರೆ. ಅನಿವಾರ್ಯವಾಗಿ ಕೋರ್ಟ್ ಮೊರೆ ಹೋಗಿ ಪೋಡಿ ದುರಸ್ತಿಗೆ ಆದೇಶ ಮಾಡಿಸಿಕೊಂಡು ಬರುವ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯ ಜನರು ದರಖಾಸ್ತು ಪೋಡಿ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

30 ಜಿಲ್ಲೆಗಳಲ್ಲಿ ಪೋಡಿ ದುರಸ್ತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ: 12,330

ದುರಸ್ತಿ ಆಗಿರುವ ಪೋಡಿ: 6,758

ಕಚೇರಿಯಲ್ಲೇ ಕಣ್ಮರೆ: ಲಂಚ ಕೊಡದಿದ್ದರೆ ಸರ್ಕಾರ ಮಂಜೂರು ಮಾಡಿರುವ ‘ಉಳುಮೆ ಪ್ರಮಾಣ’ ಪತ್ರವೂ ಇಲ್ಲದಂತೆ ಕಣ್ಮರೆ ಮಾಡಿಬಿಡುತ್ತಾರೆ. ಪೋಡಿಗೆ ಬೇಕಾಗಿರುವ ಪೂರಕ ಯಾವುದೇ ದಾಖಲೆಗಳು ಸಿಗದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಯಲ್ಲಿಯೇ ಮುಚ್ಚಿಡುತ್ತಾರೆ ಎಂಬ ಆರೋಪ ಕೇಳಿಬಂದಿವೆ. ಒತ್ತಡ ತಂದರೇ ಸರ್ವೆ ನಂಬರ್​ನಲ್ಲಿ ಇರುವ ವಿಸ್ತೀರ್ಣಕ್ಕೂ ಮತ್ತು ಮಂಜೂರಾದ ವಿಸ್ತೀರ್ಣಕ್ಕೂ ಹೊಂದಾಣಿಕೆ ಇಲ್ಲ. ಮತ್ತೆ ಸರ್ಕಾರದಿಂದ ಅಥವಾ ಕೋರ್ಟ್ ಅನುಮತಿ ತನ್ನಿ ಎಂದು ಅಲೆದಾಡಿಸುತ್ತಾರೆ.

ಸುತ್ತೋಲೆಗೆ ಏನು ಬೆಲೆ?: ತುರ್ತು ಸಂದರ್ಭದಲ್ಲಿ, ಭೂ ಮಂಜೂರಾತಿ ನೈಜವಾಗಿ ನಡೆದಿದೆ ಎನ್ನುವುದನ್ನು ಜಿಲ್ಲಾಧಿಕಾರಿ ಪರಿಶೀಲಿಸಿ ದೃಢೀಕರಿಸಿದ ನಂತರ ಏಕವ್ಯಕ್ತಿ ಪ್ರಕರಣಗಳಲ್ಲಿ ಪೋಡಿ ದುರಸ್ತಿ ನಡೆಯುತ್ತಿತ್ತು. ಎಲ್ಲವನ್ನೂ ಜಿಲ್ಲಾಧಿಕಾರಿಯೇ ನಿಭಾಯಿಸುವುದು ಸಾಧ್ಯವಾಗದೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬುದನ್ನು ಸರ್ಕಾರ ಗಮನಿಸಿ ಸುತ್ತೋಲೆ ಹೊರಡಿಸಿದೆ. (ಸಂಖ್ಯೆ ಕಂಇ 8 ಎಲ್​ಜಿಪಿ 2016 ದಿನಾಂಕ: 20.06.2016 ಹಾಗೂ ತಿದ್ದುಪಡಿ ಕಂಇ 8 ಎಲ್​ಜಿಪಿ 2016 (ಭಾಗ-1) ದಿನಾಂಕ: 18.07.2016). ಇದರನ್ವಯ, ತಹಸೀಲ್ದಾರರೇ ಭೂಮಂಜೂರಾತಿಯ ನೈಜತೆಯನ್ನು ಪರಿಶೀಲಿಸಿ, ಏಕವ್ಯಕ್ತಿ ಪ್ರಕರಣದಡಿ ಪೋಡಿ ಮಾಡಲು ಅವಕಾಶ ನೀಡಲಾಗಿದೆ. ಆದರೆ ತಹಸೀಲ್ದಾರರುಗಳು ಈ ಸುತ್ತೋಲೆಯನ್ನು ಗಾಳಿಗೆ ತೂರಿ, ಎಲ್ಲವನ್ನೂ ಮತ್ತೆ ಜಿಲ್ಲಾಧಿಕಾರಿ ಹಂತಕ್ಕೆ ಅಥವಾ ಕೋರ್ಟ್ ಮೊರೆ ಹೋಗುವುದನ್ನು ಅನಿವಾರ್ಯಗೊಳಿಸುತ್ತಿದ್ದಾರೆ.

ಸರ್ವೆ ನಕ್ಷೆ ಇಲ್ಲದೆ ಸಂಕಷ್ಟ: ಸಬ್ ರಿಜಿಸ್ಟ್ರಾರ್ ಕಚೇರಿಯ ಕಾವೇರಿ ತಂತ್ರಾಂಶ ಮತ್ತು ಮೋಜಣಿ ತಂತ್ರಾಂಶ (ನಕ್ಷೆ ಮಾಹಿತಿಯ ವೆಬ್​ಸೈಟ್) ಸಂಯೋಜನೆ ಮಾಡಲಾಗಿದೆ. ಅದಕ್ಕಾಗಿ ಸರ್ವೆ ನಕ್ಷೆ ಇಲ್ಲದೆ ಸೈಟು ಅಥವಾ ಭೂಮಿ ಕ್ರಯ, ದಾನ, ಗುತ್ತಿಗೆ ಮತ್ತು ರೈತರು ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ. ಪಿತ್ರಾರ್ಜಿತ ಆಸ್ತಿಯನ್ನು ವಿಭಾಗ ಪತ್ರ ಮಾಡಿಸಿಕೊಳ್ಳಲು ಕಡ್ಡಾಯವಾಗಿದೆ.

ಫಲಿಸದ ಯೋಜನೆ: ಯಾವುದೇ ಸರ್ಕಾರ ಪೋಡಿ ಅರ್ಜಿಗಳ ಶೀಘ್ರ ವಿಲೇವಾರಿಗೆ ನಾನಾ ಯೋಜನೆ ಕೈಗೊಂಡರೂ ಯಾವುದೂ ಸಫಲವಾಗುತ್ತಿಲ್ಲ. ಪೋಡಿ ಅದಾಲತ್, ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ, ಪಹಣಿ ತಿದ್ದುಪಡಿ ಅದಾಲತ್ ಸೇರಿದಂತೆ ಹಲವು ವಿಶೇಷ ಯೋಜನೆ ತಂದರೂ ಜನರಿಗೆ ದುರಸ್ತಿ ಪೋಡಿ ಮಾತ್ರ ಸಿಕ್ಕಿಲ್ಲ.

ಶೇ. 50 ಅರ್ಜಿ ದುರಸ್ತಿ: ರಾಜ್ಯದ 30 ಜಿಲ್ಲೆಗಳಲ್ಲಿ ಪೋಡಿ ದುರಸ್ತಿ ಕೋರಿ 12,330 ಅರ್ಜಿಗಳು ಸಲ್ಲಿಕೆಯಾಗಿವೆ. ಇಲ್ಲಿಯವರೆಗೂ 6,758 ಪೋಡಿ ಅಂದರೆ ಅಂದಾಜು ಶೇ.50 ಮಾತ್ರ ದುರಸ್ತಿ ಮಾಡಲಾಗಿದೆ. ಇದರಲ್ಲಿ ನಾಲ್ಕಾರು ವರ್ಷ ಸತಾಯಿಸಿದ ನಂತರ ನಡೆದ ಪ್ರಕರಣಗಳೇ ಹೆಚ್ಚು. ಇನ್ನು ಅನೇಕರಿಗೆ ದಾಖಲೆಗಳಿಲ್ಲ ಎಂಬ ಕಾರಣವನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಅಂತಹ ಪ್ರಕರಣಗಳಲ್ಲಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ರೀತಿ ಪೋಡಿ ದುರಸ್ತಿಗೆ ನ್ಯಾಯಾಲಯದ ಮೊರೆ ಹೋಗಿ 61 ಮಂದಿ ದುರಸ್ತಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ ಬೆಂಗಳೂರು ನಗರ ಜಿಲ್ಲೆಯದ್ದೇ 40 ಅರ್ಜಿಗಳು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಅರ್ಜಿಗಳು ನ್ಯಾಯಾಲಯದ ಆದೇಶದಿಂದ ಪೋಡಿ ಮಾಡಲಾಗಿದೆ.

ಶೇ.25 ಲಂಚ ಫಿಕ್ಸ್: ದರಖಾಸ್ತು ಪೋಡಿ ಮಾಡಿಕೊಡಲು ಕಂದಾಯ ಇಲಾಖೆ ಅಧಿಕಾರಿಗಳು ಜಮೀನಿನ ಮಾರುಕಟ್ಟೆ ಬೆಲೆಯಲ್ಲಿ ಶೇ.25 ಲಂಚ ಫಿಕ್ಸ್ ಮಾಡಿದ್ದಾರೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ 1 ಎಕರೆಗೆ 20 ರಿಂದ 30 ಲಕ್ಷ ರೂ. ವರೆಗೂ ಲಂಚ ನಿಗದಿ ಮಾಡಿದ್ದಾರೆ. ಪಿತ್ರಾರ್ಜಿತ ಆಸ್ತಿಗೆ 50 ಸಾವಿರದಿಂದ 1 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡುತ್ತಿದ್ದಾರೆ.

ಏನೇನಿದೆ ಸಮಸ್ಯೆ?

  • ಸರ್ಕಾರ ರೈತರಿಗೆ ಷರತ್ತು ವಿಧಿಸಿ ಜಮೀನು ಮಂಜೂರು ಮಾಡಿದರೂ ಅದನ್ನು ತನ್ನ ಹೆಸರಿಗೆ ಪೋಡಿ ಮಾಡಿಸಿ ಪ್ರತ್ಯೇಕ ಸರ್ವೆ ನಂಬರ್ ಮತ್ತು ಪಹಣಿ ಪಡೆಯಲು ಸಾಧ್ಯವಾಗುತ್ತಿಲ್ಲ
  • ಇದರೊಂದಿಗೆ ಪಿರ್ತ್ರಾಜಿತ ಆಸ್ತಿಗಳನ್ನು ಪೋಡಿ ಮಾಡಿಕೊಡಲು ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಒಡ್ಡುತ್ತಿದ್ದಾರೆ
  • ಪಿತ್ರಾರ್ಜಿತ ಆಸ್ತಿಯ ವಿಭಾಗ ಪತ್ರ, ದಾನ, ಮಾರಾಟ, ಗುತ್ತಿಗೆ ನೀಡಲು ಪೋಡಿ ಮಾಡಿಸಲು ಅರ್ಜಿ ಸಲ್ಲಿಸಿದರೆ ಲಂಚ ಇಲ್ಲದೆ ಅಧಿಕಾರಿಗಳು ವಿಲೇವಾರಿ ಮಾಡುತ್ತಿಲ್ಲ
  • ರೈತರು ಮತ್ತು ಆಸ್ತಿ ಮಾಲೀಕರು ಸಂಕಷ್ಟಕ್ಕೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net