

ಚಿಕ್ಕಮಗಳೂರು: ನಗರದಲ್ಲಿ ಶ್ವಾನಗಳ ಸಂಖ್ಯೆ ಮಿತಿಮೀರಿದ್ದು ಬೀದಿ ನಾಯಿಗಳ ಉಪಟಳ ಜನರ ನಿದ್ದೆಗೆಡಿಸಿದೆ. ದಿನ ಬೆಳಗಾದರೆ ರಸ್ತೆಯಲ್ಲಿ ಕಾಣುವ ಶ್ವಾನಗಳ ಹಿಂಡು ಪಾದಚಾರಿಗಳು, ದ್ವಿಚಕ್ರ ವಾಹನ ಸವಾರರು, ಮಕ್ಕಳ ಮೇಲೆ ಎರಗುವುದು ಸಾಮಾನ್ಯವಾಗಿದೆ. ನಗರದ ಹಾದಿ ಬೀದಿಯಲ್ಲಿ ಈಗ ಬೌ ಬೌನದ್ದೇ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ನಿಶ್ಚಿತ.
ಕಸದ ರಾಶಿ, ಹೋಟೆಲ್, ಮಾರುಕಟ್ಟೆಗಳು, ಮೀನು, ಮಾಂಸದ ಅಂಗಡಿಗಳ ಬಳಿ ನಾಯಿಗಳ ದೊಡ್ಡ ದಂಡೇ ಇರುತ್ತದೆ. ಸಾರ್ವಜನಿಕರು ಅವುಗಳನ್ನು ಓಡಿಸಲು ಮುಂದಾದರೆ ಮೈಮೇಲೆ ಎರಗುತ್ತವೆ.
ವಾಹನಗಳನ್ನು ಬೆನ್ನಟ್ಟಿ ಬರುವ ಶ್ವಾನ ಪಡೆ ಅವಾಂತರ ಸೃಷ್ಟಿಸುತ್ತಿವೆ. ವಾಹನ ಬರುವ ಶಬ್ದ ಕೇಳಿದರೆ ಸಾಕು ಮೇಲೆರಗಿ ಸವಾರರನ್ನು ತಬ್ಬಿಬ್ಬು ಮಾಡುತ್ತಿವೆ. ನಾಯಿಗಳಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಬೈಕ್‌ನಿಂದ ಕೆಳಗೆ ಬಿದ್ದು ಸವಾರರು ಗಾಯಗೊಂಡಿರುವ ಘಟನೆಗಳೂ ನಡೆದಿವೆ.
ನಗರದ ಐಜಿ ರಸ್ತೆ, ಮಾರುಕಟ್ಟೆ ರಸ್ತೆ, ಬಸವನಹಳ್ಳಿ, ಕೈಮರ ರಸ್ತೆಯಲ್ಲಿ ಹೆಚ್ಚಾಗಿ ಹೋಟೆಲ್‌ಗಳು, ಬೀದಿಬದಿ ಹೋಟೆಲ್‌ಗಳು, ಮಾಂಸದ ಅಂಗಡಿಗಳಿವೆ. ಬಹುತೇಕ ಮಾಲೀಕರು ಹೋಟೆಲ್‌ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಾತ್ರಿ ಸಮಯದಲ್ಲಿ ಹೊರಗಿಟ್ಟು ಹೋಗುತ್ತಾರೆ. ಇದನ್ನು ತಿನ್ನಲು ನಾಯಿಗಳು ಬರುತ್ತಿದ್ದು ಆ ಸಮಯದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಸ್ಪಲ್ಪ ಎಚ್ಚರ ತಪ್ಪಿದರೂ ಅಪಾಯ ತಪ್ಪಿದಲ್ಲ.
ನಗರದ ವಿವಿಧೆಡೆ ಬೀದಿ ನಾಯಿಗಳು ಮಕ್ಕಳು, ವೃದ್ಧರಿಗೆ ಕಚ್ಚಿದ ಪ್ರಕರಣಗಳು ವರದಿಯಾಗುತ್ತಿವೆ. ಹೀಗಾಗಿ ಪಾಲಕರು ಮಕ್ಕಳನ್ನು ಮನೆಯಿಂದ ಹೊರಗೆ ಕಳಿಸಲು ಭಯಪಡುವಂತಾಗಿದೆ. ನಾಯಿಗಳು ಬಡಾವಣೆಗಳಲ್ಲಿ ರಾತ್ರಿಯಿಡೀ ಬೊಗುಳುತ್ತ ನಿದ್ದೆಗೆ ಭಂಗ ತರುತ್ತಿವೆ. ಶ್ವಾನಗಳ ಸಂತತಿಗೆ ಕಡಿವಾಣ ಹಾಕಲು ನಗರಸಭೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ---------
5 ವರ್ಷಕೊಮ್ಮೆ ಪ್ರಾಣಿ ಗಣತಿ: ಪ್ರತಿ 5 ವರ್ಷಕ್ಕೊಮ್ಮೆ ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆ ಪ್ರಾಣಿ ಗಣತಿ ನಡೆಸುತ್ತದೆ. ಅದರಂತೆ ನಾಯಿಗಳನ್ನು ಹಿಡಿದು ಅವುಗಳ ಕಿವಿ ಅಥವಾ ಇನ್ಯಾವುದಾದರೂ ಭಾಗದಲ್ಲಿ ಗುರುತು ಮಾಡುವ ಮೂಲಕ ಲೆಕ್ಕ ಹಾಕಲಾಗುತ್ತದೆ. ಅದೇ ರೀತಿ ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆಯ ಬಳಿಕ ಕಿವಿಗೆ ಸಣ್ಣ ರಂಧ್ರ ಮಾಡಿ ಗುರುತು ಹಾಕಲಾಗುತ್ತದೆ. ನಗರಸಭೆಯ ಅಂದಾಜಿನ ಪ್ರಕಾರ ನಗರದಲ್ಲಿ 3 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ.
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ: ಕರ್ನಾಟಕ ಪುರಸಭೆ ಕಾಯ್ದೆಯ ಸೆಕ್ಷನ್ 222ರ ಅನ್ವಯ ನಗರಸಭೆಯು ಬೀದಿನಾಯಿ ಸಂತತಿಯನ್ನು ನಿಯಂತ್ರಿಸಬೇಕು. ಬೀದಿ ನಾಯಿಗಳ ಸಂಖ್ಯೆ ಹೆಚ್ಚಿದ್ದರೂ ನಿಯಮದ ಪ್ರಕಾರ ಅವುಗಳನ್ನು ಕೊಲ್ಲುವಂತಿಲ್ಲ. ಬದಲಿಗೆ ಕಾಲಕಾಲಕ್ಕೆ ನಾಯಿಗಳಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಮೂರು ದಿನಗಳ ಕಾಲ ಅವುಗಳ ಆರೋಗ್ಯದ ಬಗ್ಗೆ ನಿಗಾವಹಿಸಬೇಕು. ಒಂದು ನಾಯಿಗೆ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಲು ಸುಮಾರು 2 ಸಾವಿರ ರೂ. ವೈದ್ಯಕೀಯ ವೆಚ್ಚವಾಗುತ್ತದೆ. ಇಷ್ಟು ದುಬಾರಿ ಶುಲ್ಕ ಭರಿಸುವುದು ನಗರಸಭೆಗೆ ಕಷ್ಟ. ಜತೆಗೆ ಶಸ್ತ್ರಚಿಕಿತ್ಸೆಯ ನಂತರ ಮೂರು ದಿನಗಳ ಕಾಲ ನಾಯಿಗಳ ಪಾಲನೆಗೆ ಸೌಲಭ್ಯವಿಲ್ಲದಾಗಿದೆ.
ನಾಯಿ ಹಿಡಿಯುವ ತಜ್ಞರನ್ನು ಕರೆಸಿ ನಾಯಿಗಳನ್ನು ಹಿಡಿಸಿ ನಗರ ಹೊರವಲಯದ ಅರಣ್ಯ ಪ್ರದೇಶ ಅಥವಾ ಗ್ರಾಮಗಳಲ್ಲಿ ಬಿಟ್ಟು ಹೋಗುತ್ತಾರೆ. ನಂತರ ನಾಯಿಗಳು ದಿನಬೆಳಗಾಗುವಷ್ಟರಲ್ಲಿ ನಗರಕ್ಕೆ ವಾಪಸ್ ಬರುತ್ತಿವೆ. ಇದರಿಂದ ಸಮಸ್ಯೆ ತಾರ್ಕಿಕ ಅಂತ್ಯ ಕಾಣುತ್ತಿಲ್ಲ.
ಕೆಡಿಪಿ ಸಭೆಯಲ್ಲೂ ಚರ್ಚೆ: ಇತ್ತೀಚೆಗೆ ನಡೆದ ಕೆಡಿಪಿ ಸಭೆಯಲ್ಲೂ ಶಾಸಕ ಎಚ್.ಡಿ.ತಮ್ಮಯ್ಯ ಅವರು ಬೀದಿನಾಯಿಗಳ ವಿಚಾರವನ್ನು ಪ್ರಸ್ತಾಪಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಪರಿಹರಿಸಲು ಸೂಚಿಸಿದ್ದರು. ಇದಕ್ಕೆ ಎಂಎಲ್‌ಸಿ ಎಸ್.ಎಲ್.ಬೋಜೇಗೌಡ ಅವರು ಧ್ವನಿಗೂಡಿಸಿ ಇದು ನಿನ್ನೆ ಮೊನ್ನೆಯ ಸಮಸ್ಯೆಯಲ್ಲ, ವರ್ಷದಿಂದ ವರ್ಷಕ್ಕೆ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕಾನೂನು ರೀತಿ ಸಂತತಿ ಸಂತಾನ ಶಕ್ತಿಹರಣ ಮಾಡಲು ಅಧಿಕಾರಿಗಳಿಗೆ ಸಲಹೆ ನೀಡಿದ್ದರು.