

ಚಿಕ್ಕಬಳ್ಳಾಪುರ : ಸಾಮಾಜಿಕ ಭದ್ರತೆಗೆ ಸಂಬಂಧಪಟ್ಟಂತೆ ಸರ್ಕಾರ ಜಾರಿಗೊಳಿಸಿರುವ ವೃದ್ಧಾಪ್ಯ, ಅಂಗವಿಕಲ, ವಿಧವಾ ಸೇರಿ ವಿವಿಧ ಪಿಂಚಣಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ತಹಸೀಲ್ದಾರ್‌ಗಳಿಗೆ ಸೂಚಿಸಿರುವ ಜಿಲ್ಲಾಧಿಕಾರಿ ಲತಾ, ಅರ್ಹರು ಯೋಜನೆಗಳಿಂದ ವಂಚಿತರಾಗದಂತೆ ಅಗತ್ಯ ಕ್ರಮ ಕೈಗೊಂಡು ಆ.12ರೊಳಗೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಾಕೀತು ಮಾಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪಿಂಚಣಿ ಯೋಜನೆಗಳ ಅನುಷ್ಠಾನ ಕುರಿತು ಸೋಮವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಅರ್ಹರನ್ನು ಗುರುತಿಸಲು ಗ್ರಾಮ ಮತ್ತು ವಾರ್ಡ್‌ವಾರು ಮನೆ ಮನೆ ಸಮೀಕ್ಷೆ ನಡೆಸಿ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ ದಾಖಲೀಕರಣ ಮಾಡಬೇಕು, ನಂತರ ಪಿಂಚಣಿ ಮಂಜೂರಾತಿಗೆ ಕ್ರಮ ವಹಿಸುವ ಜತೆಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ಈ ಎಲ್ಲ ಕಾರ್ಯಗಳನ್ನು ಅಭಿಯಾನದ ಮಾದರಿಯಲ್ಲಿ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಲಾನುಭವಿಗಳಿಗೆ ನಿಗದಿತ ಅವಧಿಯಲ್ಲಿ ಪಿಂಚಣಿ ತಲುಪುವಂತೆ ನಿಗಾ ವಹಿಸುವ ಜತೆಗೆ ಮನಿ ಆರ್ಡರ್ ಮೂಲಕ ನಗದು ರೂಪದಲ್ಲಿ ನೀಡುವ ಬದಲು ಪಿಂಚಣಿದಾರರ ಬ್ಯಾಂಕ್ ಖಾತೆ ವಿವರ ಪಡೆದು ನೇರವಾಗಿ ಖಾತೆಗೆ ಹಣ ವರ್ಗಾವಣೆ ಮಾಡಬೇಕು, ಈ ಕಾರ್ಯ ಶೇ.100 ಪ್ರಗತಿಯಾಗಲೇಬೇಕೆಂದು ತಾಕೀತು ಮಾಡಿದರು.
ಜಿಲ್ಲಾ ಭೂದಾಖಲೆ ಇಲಾಖೆ ಉಪನಿರ್ದೇಶಕ ಮಂಜುನಾಥ ತವಣೆ, ತಹಸೀಲ್ದಾರ್‌ಗಳಾದ ಗಣಪತಿಶಾಸ್ತ್ರಿ, ರಾಜೀವ್, ಹನುಮಂತರಾಯಪ್ಪ, ಶ್ರೀನಿವಾಸ್, ಸಿಗ್ಬತ್‌ವುಲ್ಲಾ, ದಿವಾಕರ್ ಇತರರಿದ್ದರು.
ಪೌತಿಖಾತಿ ಆಂದೋಲನ : ಜಮೀನಿನ ಮಾಲೀಕ ಮರಣ ಹೊಂದಿದ ನಂತರ ಪೌತಿ ಮಾಲೀಕತ್ವವು ಮೃತರ ಉತ್ತಾಧಿಕಾರಿಗಳ ಹೆಸರಿಗೆ ಬದಲಾವಣೆಯಾಗದಿದ್ದಲ್ಲಿ ಅಂತಹ ಜಮೀನುಗಳ ಸ್ವಾಧೀನವನ್ನು ಅವರ ಕುಟುಂಬಸ್ಥರೇ ಹೊಂದಿದ್ದರೂ ಜಮೀನು ಅಭಿವೃದ್ಧಿಗೆ ಸಾಲ ಸೌಲಭ್ಯ, ವಿಮೆ ಅಥವಾ ಸಾರ್ವಜನಿಕ ಉದ್ದೇಶಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡಾಗ ಪರಿಹಾರ ಪಡೆಯಲು ಸಮಸ್ಯೆಯಾಗಲಿದೆ. ಇದನ್ನು ಮನಗಂಡು ಜಿಲ್ಲಾಡಳಿತ ಪೌತಿಖಾತೆ ಆಂದೋಲನ ಕೈಗೊಳ್ಳಲು ಉದ್ದೇಶಿಸಿದೆ. ಹೋಬಳಿವಾರು, ಪೌತಿ ಖಾತೆ ಕಾರ್ಯವನ್ನು ಹಂತ ಹಂತವಾಗಿ ಕೈಗೊಂಡು ಭೂಮಿ ತಂತ್ರಾಂಶದ ಮೂಲಕ ನಾಡಕಚೇರಿಗಳಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆ.30ರೊಳಗೆ ಪೂರ್ಣಗೊಳಿಸುವಂತೆ ಲತಾ ಸೂಚಿಸಿದರು.
ಒತ್ತುವರಿ ತೆರವು : ಕೆರೆಗಳಿಗೆ ಕಾಲುವೆ ಮೂಲಕ ಎಚ್.ಎನ್.ವ್ಯಾಲಿ ನೀರು ಹರಿಸಲಾಗುತ್ತಿದೆ. ಮಳೆಗಾಲವಾಗಿರುವುದರಿಂದ ಹೆಚ್ಚಿನ ಪ್ರಮಾಣದ ನೀರು ಕೆರೆಗಳಿಗೆ ಹರಿಯುತ್ತಿದ್ದು, ಕಾಲುವೆಗಳಲ್ಲಿ ಕುರುಚಲು ಗಿಡಗಳು ಬೆಳೆದಿರುವುದು ಹಾಗೂ ಒತ್ತವರಿಗಳಿಂದಾಗಿ ನೀರು ಹರಿಯಲು ಅಡ್ಡಿಯಾಗಿದೆ. ಈ ಹಿನ್ನೆಲೆಯಲ್ಲಿ ಭೂ ಮಾಪನ ಇಲಾಖೆ ಸರ್ವೇ ಕೈಗೊಂಡು ಒತ್ತವರಿಯಾಗಿದ್ದಲ್ಲಿ ತೆರವುಗೊಳಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.