ಪಿಂಚಣಿ ಸೌಲಭ್ಯ ತಕ್ಷಣ ಮಂಜೂರು

NYK PINCHANI 01
Published on

ನಾಯಕನಹಟ್ಟಿ: ಸಾಮಾಜಿಕ ಸುರಕ್ಷಾ ಯೋಜನೆಗಳನ್ನು ಆದ್ಯತೆಯ ಮೇಲೆ ತಕ್ಷಣ ಮಂಜೂರು ಮಾಡಲಾಗುವುದು ಎಂದು ಉಪವಿಭಾಗಾಧಿಕಾರಿ ಡಾ.ಎಂ.ಕಾರ್ತಿಕ್ ಹೇಳಿದರು.

ಪಟ್ಟಣದ ನಾಡ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬದುಕಿನ ಮುಸ್ಸಂಜೆಯಲಿರುವ ಹಾಗೂ ಆಶ್ರಯದ ಸಮಸ್ಯೆ ಇರುವವರಿಗೆ ಬೆಂಬಲವಾಗಿ ಸರ್ಕಾರಿ ಪಿಂಚಣಿ ನೀಡುತ್ತಿದೆ. ಅಂಗವಿಕಲರು, ವಿಧವೆ, ತೃತೀಯ ಲಿಂಗಿಗಳು ಸೇರಿ ಸಮಾಜದಲ್ಲಿ ಸಂಕಷ್ಟಕ್ಕೆ ಸಿಲುಕಿದವರಿಗೆ ಸರ್ಕಾರದ ನೆರವು ಅಗತ್ಯ ಎಂದರು.

ಕೆಲವು ಜನರು ಈಗಾಗಲೇ ಪಿಂಚಣಿ ಪಡೆಯುತ್ತಿದ್ದು, ಕೆಲವರ ಆಧಾರ್ ಲಿಂಕ್ ಆಗಿಲ್ಲದೆ ಸಮಸ್ಯೆ ಆಗಿದೆ. ಇದಕ್ಕೆ ತಕ್ಷಣ ಪರಿಹಾರ ಕಲ್ಪಿಸಿ ಸೌಲಭ್ಯ ಮುಂದುವರಿಸಲಾಗುವುದು. ಅರ್ಹರಿಗೆ ಸ್ಥಳದಲ್ಲಿಯೇ ಮಂಜೂರಾತಿ ಆದೇಶ ನೀಡಲಾಗುವುದು ಎಂದು ಹೇಳಿದರು.

ಹೋಬಳಿಯಲ್ಲಿ 2134 ವಿಧವಾ ವೇತನ, 4704 ಸಂಧ್ಯಾಸುರಕ್ಷಾ, 1069 ಅಂಗವಿಕಲರು, 88 ಮಂದಿ ಮನಸ್ವಿನಿ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದಾರೆ ಎಂದರು.

ಉಪ ತಹಸೀಲ್ದಾರ್ ಬಿ.ಶಕುಂತಲಾ, ರಾಜಸ್ವ ನಿರೀಕ್ಷಕ ಚೇತನ್ ಇತರರಿದ್ದರು.

ಆದೇಶ ಪತ್ರ: ಸಾಮಾಜಿಕ ಸುರಕ್ಷಾ ಯೋಜನೆಗಳ ಕುರಿತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅದಾಲತ್ ಉತ್ತಮ ವೇದಿಕೆ ಆಗಿದೆ. ಸಮಾಜದಲ್ಲಿರುವ ಎಲ್ಲ ಜನರಿಗೆ ಸ್ವತಂತ್ರವಾಗಿ ಜೀವಿಸಲು ಅಗತ್ಯವಾದ ಅವಕಾಶಗಳನ್ನು ಸರ್ಕಾರ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಪಿಂಚಣಿಯನ್ನು ಸರ್ಕಾರ ನೀಡುತ್ತಿದೆ. ಅದಾಲತ್‌ನಲ್ಲಿ 50ಕ್ಕೂ ಜನರಿಗೆ ಪಿಂಚಣಿ ಆದೇಶ ಪತ್ರ ವಿತರಿಸಲಾಗಿದೆ.-ರೆಹಾನ್ ಪಾಷಾ, ತಹಸೀಲ್ದಾರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net