ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ದಂಡ: ಸಚಿವ ಡಾ. ಸುಧಾಕರ್ ಎಚ್ಚರಿಕೆ

uvce
Published on

ಬೆಂಗಳೂರು ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು (ಯುವಿಸಿಇ) ನೂತನ ಕಟ್ಟಡ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸದಿದ್ದರೆ ದಂಡ ವಿಧಿಸುವುದಾಗಿ ಗುತ್ತಿಗೆದಾರರಿಗೆ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಎಚ್ಚರಿಕೆ ನೀಡಿದ್ದಾರೆ.

ಯುವಿಸಿಇ ಮತ್ತು ನೃಪತುಂಗ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸುವ ವೇಳೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದಾರೆ.

ಯುವಿಸಿಇಯನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ನೂತನ ಕಟ್ಟಡದ ಅವಶ್ಯಕತೆ ಇದೆ. 87 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿರುವ ಕಾಮಗಾರಿ ಆರಂಭವಾಗಿ ಈಗಾಗಲೇ ಒಂದು ವರ್ಷ ಕಳೆದಿದ್ದು, ಉಳಿದ ಒಂದು ವರ್ಷ ಮಾತ್ರ ಬಾಕಿ ಇದೆ. ಆದರೆ, ಕಾಮಗಾರಿ ಇನ್ನೂ ತಳಹದಿ ಹಂತದಲ್ಲಿಯೇ ಇದೆ. ವಿಳಂಬಕ್ಕೆ ಕಾರಣಗಳೇನು? ಈ ರೀತಿ ವಿಳಂಬ ಮಾಡುವುದು ಸರಿಯಲ್ಲ ತಾಕೀತು ಮಾಡಿದರು.

ಲ್ಯಾಬ್ ಉನ್ನತೀಕರಣ ಅಗತ್ಯ:

ಯುವಿಸಿಇ ದೇಶದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಒಂದಾಗಿದೆ. ಈಗ ಐಐಟಿ ಮಾದರಿ ಎಂದು ೋಷಿಸಲಾಗಿದೆ. ಆದರೆ, ಇಲ್ಲಿ ಅತ್ಯಾಧುನಿಕ ಪ್ರಯೋಗಾಲಯದ ಉಪಕರಣಗಳ ಅಗತ್ಯವಿದೆ. ಬೇರೆ ಸಂಸ್ಥೆಗಳಿಗೂ ಯುವಿಸಿಇ ಗೂ ಹೋಲಿಸಿದರೆ ತುಂಬಾ ಹಳೆಯ ಯಂತ್ರಗಳಿವೆ.

ಮೆಕಾಣಿಕಲ್ ವಿಭಾಗಕ್ಕೆ ವೋಲ್ವೋ, ಟೊಯೊಟಾ ಸೇರಿ ಹಲವು ಸಂಸ್ಥೆಗಳು ಇಂಜಿನ್ ಒಳಗೊಂಡಂತೆ ಹಲವು ಬಿಡಿಭಾಗಗಳನ್ನು ಕಳುಹಿಸಿಕೊಟ್ಟಿವೆ. ಆದರೂ ಇವತ್ತಿನ ಕಾಲಕ್ಕೆ ಇದು ಸಾಲದಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನೃಪತುಂಗ ಆಡಳಿತ ಮಂಡಳಿ ಕಟ್ಟಡಕ್ಕೆ ಮನವಿ:

ನೃಪತುಂಗ ವಿಶ್ವವಿದ್ಯಾಲಯದಲ್ಲಿ 57 ಕೋಟಿ ರೂ. ವೆಚ್ಚದಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಇದರ ಜತೆಗೆ ಅಂದಾಜು 30 ಕೋಟಿ ರೂ. ವೆಚ್ಚದಲ್ಲಿ ಆಡಳಿತ ಮಂಡಳಿ ನಿರ್ಮಾಣಕ್ಕೆ ನೀಲಿನಕ್ಷೆ ರಚನೆ ಮಾಡಲಾಗಿದೆ. ಸರ್ಕಾರದಿಂದ ಅನುಮತಿ ಕೊಡಿಸುವಂತೆ ವಿವಿ ಆಡಳಿತ ಮಂಡಳಿಯು ಒತ್ತಾಯಿಸಿತು.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವರು, ವರ್ಲ್ಡ್ ಬ್ಯಾಂಕಿನಿಂದ ಇಲಾಖೆಯ ವಿವಿಧ ಉದ್ಧೇಶಗಳಿಗೆ ಸಾಲ ಪಡೆಯಲಾಗುತ್ತಿದೆ. ಸಾಧ್ಯವಾದರೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net