

ಶಿವಮೊಗ್ಗ: ವಿಮೆ ಪರಿಹಾರ ನೀಡಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಪಾಲಿಸಿಗೆ ಅನುಗುಣವಾಗಿ ವಿಮೆ ಮೊತ್ತ ಪಾವತಿಸುವಂತೆ ಆದೇಶಿಸಿದೆ.
ಲಕ್ಷ್ಮಮ್ಮ ಎಂಬುವರ ಪುತ್ರ ಗಣೇಶ ಎಂಬಾತ ಬೈಕ್ ಖರೀದಿಸಿ ಅದಕ್ಕೆ ವಿಮಾ ಪಾಲಿಸಿ ಪಡೆದಿದ್ದರು. 2023ರ ಮಾಚ್ 24ರಂದು ಬೈಕ್ ಅಪಘಾತದಲ್ಲಿ ಗಣೇಶ್ ಮೃತಪಟ್ಟಿದ್ದರು. ಆಗ ತಾಯಿ ಲಕ್ಷ್ಮಮ್ಮ ವಿಮಾ ಕಂಪನಿಯನ್ನು ಸಂಪರ್ಕಿಸಿ ವಿಮೆ ಪರಿಹಾರ ನೀಡುವಂತೆ ಕೋರಿದ್ದರು.
ಗಣೇಶ್ ಚಾಲನಾ ಪರವಾನಗಿ ಹೊಂದಿರಲಿಲ್ಲ. ಬದಲಿಗೆ ಕಲಿಕಾ ಪರವಾನಗಿ ಹೊಂದಿದ್ದರು. ಇದು ವಿಮೆ ನಿಬಂಧನೆಗೆ ಹೊರತಾಗಿದೆ. ಹೀಗಾಗಿ ವಿಮಾ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ವಿಮೆ ಕಂಪನಿ ತಿಳಿಸಿತ್ತು. ಇದರಿಂದ ಬೇಸತ್ತ ಲಕ್ಷ್ಮಮ್ಮ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಮೊರೆ ಹೋಗಿದ್ದರು.
ಪ್ರಕರಣದ ವಾದ-ಪ್ರತಿವಾದ, ದಾಖಲೆಗಳನ್ನು ಪರಿಶೀಲಿಸಿದ ಆಯೋಗ ಅರ್ಜಿದಾರರು ವಿಮಾ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ ಎಂದು ಪರಿಗಣಿಸಿತು. ಅರ್ಜಿದಾರರಿಗೆ ಪಾಲಿಸಿಗೆ ಅನುಗುಣವಾಗಿ ಪಾಲಿಸಿ ಪರಿಹಾರ ಮೊತ್ತ 15ಲಕ್ಷ ರೂ.ಗಳನ್ನು ವಾರ್ಷಿಕ ಶೇ.9ರ ಬಡ್ಡಿಯೊಂದಿಗೆ ನೀಡಬೇಕು.
ಮಾನಸಿಕ ಹಿಂಸೆ ಮತ್ತು ಹಾನಿಗಳಿಗೆ ಸಂಬಂಧಿಸಿದಂತೆ 30 ಸಾವಿರ ಹಾಗೂ ವ್ಯಾಜ್ಯದ ಖರ್ಚು 10 ಸಾವಿರ ರೂ. ಪಾವತಿಸ ಬೇಕು ಎಂದು ಆಯೋಗದ ಅಧ್ಯಕ್ಷ ಟಿ.ಶಿವಣ್ಣ, ಸದಸ್ಯರಾದ ಸವಿತಾ ಬಿ.ಪಟ್ಟಣಶೆಟ್ಟಿ, ಬಿ.ಡಿ.ಯೋಗಾನಂದ ಬಾಂಡ್ಯ ಇವರನ್ನೊಳಗೊಂಡ ಪೀಠ ಆದೇಶಿಸಿದೆ.