ನಗರಸಭೆಯ ಇಬ್ಬರು ಅಧಿಕಾರಿಗಳಿಗೆ ದಂಡ

1 Nagara sabha
Published on

ಹುಣಸೂರು : ಒಂದೇ ಪ್ರಕರಣದಲ್ಲಿ ನಗರಸಭೆಯ ಇಬ್ಬರು ಅಧಿಕಾರಿಗಳು ಮಾಹಿತಿ ಹಕ್ಕು ಆಯೋಗದಿಂದ ದಂಡ ಶಿಕ್ಷೆಗೆ ಒಳಗಾಗಿದ್ದಾರೆ. ನಗರಸಭೆಯ ಈ ಹಿಂದಿನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ವ್ಯವಸ್ಥಾಪಕ ಹುದ್ದೆಯನ್ನು ನಿರ್ವಹಿಸಿದ್ದ ಚಂದ್ರು ಮತ್ತು ಶ್ರೀನಿವಾಸ ಅವರಿಗೆ ಆಯೋಗ ತಲಾ 25,000 ರೂ. ದಂಡ ವಿಧಿಸಿ ಶಿಕ್ಷೆ ನೀಡಿದೆ.
ಘಟನೆ ವಿವರ: ನಗರಸಭೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿದ್ದ ಲಕ್ಷ್ಮೀ ಎನ್ನುವವರು ಅಕ್ರಮ ನೇಮಕಾತಿ ಹೊಂದಿದ್ದು, ಅವರ ನೇಮಕಾತಿಗೆ ಸಂಬಂಧಪಟ್ಟಂತೆ ಜನನ ದೃಢೀಕರಣ ಪತ್ರ ಇನ್ನಿತರ ದಾಖಲೆಗಳನ್ನು ಕೋರಿ ಮಾಹಿತಿ ಹಕ್ಕು ಕಾಯ್ದೆಯಡಿ ಸಾಮಾಜಿಕ ಕಾರ್ಯಕರ್ತ ಇಂಟೆಕ್ ರಾಜು 2022ರ ಜೂನ್6 ರಂದು ಅರ್ಜಿ ಸಲ್ಲಿಸಿದ್ದರು. ಅಂದಿನ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀನಿವಾಸ ಪರವಾಗಿ ಚಂದ್ರು ವಿಚಾರಣೆಗೆ ಹಾಜರಾಗಿದ್ದರು. ನಿಗದಿತ ಅವಧಿ ಪೂರ್ಣಗೊಂಡರೂ ಶ್ರೀನಿವಾಸ ಯಾವುದೇ ಮಾಹಿತಿ ನೀಡದ ಕಾರಣ ಅರ್ಜಿದಾರ ರಾಜು ಪ್ರಥಮ ಮೇಲ್ಮನವಿ ಪ್ರಾಧಿಕಾರಿ(ಪೌರಾಯುಕ್ತ)ರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲೂ ಮಾಹಿತಿ ಪಡೆಯುವಲ್ಲಿ ವಿಫಲವಾದ ಕಾರಣ ರಾಜ್ಯ ಮಾಹಿತಿ ಹಕ್ಕು ಆಯೋಗಕ್ಕೆ 2022ರ ಅ.13ರಂದು ದೂರು ಸಲ್ಲಿಸಿದ್ದರು.
ಆದರೆ ಶ್ರೀನಿವಾಸ, ಚಂದ್ರು ಯಾವುದೇ ಮಾಹಿತಿ ನೀಡದೇ ಸರಿ ಸುಮಾರು 400ಕ್ಕೂ ಹೆಚ್ಚು ದಿನಗಳ ಕಾಲ ವಿಳಂಬ ಮಾಡಿದ್ದಾರೆಂದು ಆರೋಪಿಸಿರುವ ಆಯೋಗ, ಇಬ್ಬರು ಅಧಿಕಾರಿಗಳ ವೇತನದಲ್ಲಿ ತಲಾ 25 ಸಾವಿರ ರೂ. ಕಡಿತಗೊಳಿಸಿ ಸರ್ಕಾರಿ ಲೆಕ್ಕಶೀರ್ಷಿಕೆ ಖಾತೆಗೆ ಜಮಾ ಮಾಡಲು ಪೌರಾಯುಕ್ತರಿಗೆ ಸೂಚಿಸಿದೆ. ಅಲ್ಲದೇ ಅರ್ಜಿದಾರರು ಕೋರಿರುವ ಮಾಹಿತಿಯನ್ನು ಕೂಡಲೇ ನೀಡಿ ಅದರ ಪ್ರತಿಯೊಂದನ್ನು ಆಯೋಗಕ್ಕೆ ತಲುಪಿಸಲು ಹಾಲಿ ಸಾರ್ವಜನಿಕ ಮಾಹಿತಿ ಅಧಿಕಾರಿ ಸಿದ್ದಯ್ಯ ಅವರಿಗೆ ಸೂಚಿಸಿದೆ. ಶ್ರೀನಿವಾಸ ಅವರು ಸದ್ಯ ಇಲವಾಲ ನಗರಸಭೆ ಕಂದಾಯ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net