

ನವದೆಹಲಿ : ಪೆಗಾಸಸ್ ಬೇಹುಗಾರಿಕೆ ಸಾಫ್ಟ್ವೇರ್ನಿಂದ ವಿಪಕ್ಷ ರಾಜಕಾರಣಿಗಳ ಮತ್ತು ಪತ್ರಕರ್ತರ ಫೋನ್ಗಳನ್ನು ಹ್ಯಾಕ್ ಮಾಡುಲಾಗುತ್ತಿದೆ ಎಂಬ ಆರೋಪಗಳು ಸಾಮಾಜಿಕ ಮಾಧ್ಯಮದಿಂದ ಹಿಡಿದು, ಸಂಸತ್ವರೆಗೆ ದೇಶದಲ್ಲಿ ಸಂಚಲನ ಮೂಡಿಸಿದೆ. ಹೀಗಿರುವಾಗ ಪೆಗಾಸಸ್ ಪ್ರಕರಣದ ಬಗ್ಗೆ ವಿಶೇಷ ತನಿಖೆ ಆದೇಶಿಸಬೇಕೆಂದು ಕೋರಿ ಹಲವು ರಿಟ್ ಅರ್ಜಿಗಳು ಸುಪ್ರೀಂ ಕೋರ್ಟ್ ಮುಂದೆ ವಿಚಾರಣೆಗೆ ಬಂದಿವೆ.
ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನೊಳಗೊಂಡ ನ್ಯಾಯಪೀಠವು, ಹಿರಿಯ ಪತ್ರಕರ್ತ ಎನ್.ರಾಮ್ ಮತ್ತಿತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತು. ಪೆಗಾಸಸ್ ಬಗ್ಗೆ ಕೇಂದ್ರ ಸರ್ಕಾರದಿಂದ ಸ್ಪಷ್ಟನೆ ಕೋರಿರುವ ಅರ್ಜಿದಾರರು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗೀತನಕ್ಕೆ ಧಕ್ಕೆಯಾಗಿದೆ ಎಂದು ಪ್ರಸ್ತಾಪಿಸಿದರು.
ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಅವರು, ಫೋನ್ ಹ್ಯಾಕ್ ಆಗುತ್ತಿದೆ ಎಂದ ಪಕ್ಷದಲ್ಲಿ ಯಾರೂ ಈ ಬಗ್ಗೆ ಐಟಿ ಕಾಯ್ದೆಯಡಿ ದೂರು ಏಕೆ ಸಲ್ಲಿಸಿಲ್ಲ ಎಂದು ಪ್ರಶ್ನಿಸಿದರು. ಮತ್ತೊಬ್ಬ ಅರ್ಜಿದಾರ ವಕೀಲ ಎಂ.ಎಲ್.ಶರ್ಮ ಅವರಿಗೆ ನ್ಯೂಸ್ಪೇಪರ್ ಕಟಿಂಗ್ಗಳನ್ನಷ್ಟೇ ಅಡಕ ಮಾಡಿ ಕೋರ್ಟ್ ನಿರ್ದೇಶನ ಕೋರಿ ಅರ್ಜಿ ಸಲ್ಲಿಸಿದ್ದೀರಲ್ಲಾ ಎಂದು ಕೇಳಿದರು. ಜೊತೆಗೇ, ಈ ಬಗೆಗಿನ "ಪತ್ರಿಕಾ ವರದಿಗಳು ಸರಿಯಾಗಿವೆ ಎಂದರೆ ಆರೋಪಗಳು ಗಂಭೀರವಾಗಿವೆ" ಎಂದೂ ಅಭಿಪ್ರಾಯಪಟ್ಟರು.
ವಿಚಾರಣೆಯಲ್ಲಿ ಕೇಂದ್ರ ಸರ್ಕಾರದ ಪ್ರಾತಿನಿಧ್ಯ ಇರಬೇಕು ಎಂದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ವಕೀಲರಿಗೆ ಅರ್ಜಿಗಳ ಪ್ರತಿಗಳನ್ನು ನೀಡಲು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 10ಕ್ಕೆ ಮುಂದೂಡಿತು. (ಏಜೆನ್ಸೀಸ್)