ಕಾರು ಗುದ್ದಿ ಪಾದಚಾರಿ ಸಾವು

accident-15
Published on

ಬೆಂಗಳೂರು: ಪಾನಮತ್ತನಾಗಿ ಚಾಲಕ ಅತಿವೇಗ, ನಿರ್ಲಕ್ಷ್ಯದಿಂದ ಕಾರು ಚಲಾಯಿಸಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾಳೆ.

ಬಸವೇಶ್ವರನಗರ ನಿವಾಸಿ ಸಂಧ್ಯಾ (30) ಮೃತ ದುರ್ದೈವಿ. ಕೆಂಗೇರಿ ಬಿಎಂಟಿಸಿ ಟಿಟಿಎಂಸಿ ಬಳಿ ಶನಿವಾರ ಸಂಜೆ 7 ಗಂಟೆಯಲ್ಲಿ ನಡೆದಿದೆ. ಈ ಸಂಬಂಧ ಕಾರು ಚಾಲಕ ನಾಗರಬಾವಿಯ ಧನುಷ್ (20) ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಖಾಸಗಿ ಕಂಪನಿ ಉದ್ಯೋಗಿ ಸಂಧ್ಯಾ, ಶನಿವಾರ ಕೆಲಸ ಮುಗಿಸಿಕೊಂಡು ಮನೆಗೆ ತೆರಳಲು ಕೆಂಗೇರಿ ಬಿಎಂಟಿಸಿ ಟಿಟಿಎಂಸಿ ಬಳಿ ರಸ್ತೆ ದಾಟುತ್ತಿದ್ದರು. ರಾಜರಾಜೇಶ್ವರಿನಗರ ಕಡೆಯಿಂದ ವೇಗವಾಗಿ ಬಂದ ಕಾರು, ಏಕಾಏಕಿ ಸಂಧ್ಯಾಗೆ ಡಿಕ್ಕಿ ಹೊಡೆದಿದೆ.

ಗುದ್ದಿದ ರಭಸಕ್ಕೆ ಸಂಧ್ಯಾ ಎರಡು ಕಾಲುಗಳು ಮುರಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾದ ಪರಿಣಾಮ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ವೈದ್ಯಕೀಯ ಪರೀಕ್ಷೆ ವೇಳೆ ಚಾಲಕ ಧನುಷ್, ಮದ್ಯ ಸೇವಿಸಿರುವುದು ಖಚಿತವಾಗಿದೆ.ಈ ಸಂಬಂಧ ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net