

ಬೆಂಗಳೂರು: ರಸ್ತೆ ದಾಟುವಾಗ ದ್ವಿಚಕ್ರ ವಾಹನ ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟಿದ್ದಾರೆ.
ತಮಿಳುನಾಡು ಕೃಷ್ಣಗಿರಿ ಮೂಲದ ರಮೇಶ್ ಜ್ಯೋತಿಮಣಿ(೩೯) ಮೃತರು.
ಶನಿವಾರ ರಾತ್ರಿ ೧೦.೧೫ಕ್ಕೆ ಕೋನೇನ ಅಗ್ರಹಾರದ ಬಳಿಯ ಎಲೆಕ್ಟ್ರಾನಿಕ್‌ಸಿಟಿ ಮೇಲ್ಸೇತುವೆ ಪ್ರವೇಶ ದ್ವಾರದ ಬಳಿ ಈ ಅಪಘಾತ ಸಂಭವಿಸಿದೆ.
ರಮೇಶ್ ಅವರು ಬೊಮ್ಮನಹಳ್ಳಿಯ ಸಂಬಂಧಿಕರ ಮನೆಗೆ ತೆರಳಲು ರಾತ್ರಿ ತಮಿಳುನಾಡಿನಿಂದ ಬಸ್‌ನಲ್ಲಿ ಕೋನೇನ ಅಗ್ರಹಾರಕ್ಕೆ ಬಂದಿದ್ದರು. ಈ ವೇಳೆ ಎಲೆಕ್ಟ್ರಾನಿಕ್‌ಸಿಟಿ ಸಂಪರ್ಕಿಸುವ ಮೇಲ್ಸೇತುವೆ ಪ್ರವೇಶದ್ವಾರದ ಬಳಿ ರಸ್ತೆ ದಾಟುವಾಗ ವೇಗವಾಗಿ ಬಂದ ದ್ವಿಚಕ್ರ ವಾಹನ ಏಕಾಏಕಿ ರಮೇಶ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಉರುಳಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಅವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮಾರ್ಗ ಮಧ್ಯೆಯೇ ರಮೇಶ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಸಂಚಾರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದ್ವಿಚಕ್ರ ವಾಹನ ಸವಾರನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಮಡಿವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.