ಬೆಂಗಳೂರು: ಸ್ಯಾಂಡಲ್‌ವುಡ್‌ನಂತೆಯೇ ಪರಭಾಷೆಗಳಲ್ಲೂ ನಟ ಶಿವರಾಜಕುಮಾರ್‌ಗೆ ಬೇಡಿಕೆ ಹೆಚ್ಚುತ್ತಿದೆ. ಈಗಾಗಲೇ ತಮಿಳಿನ ‘ಜೈಲರ್’, ‘ಕ್ಯಾಪ್ಟನ್ ಮಿಲ್ಲರ್’ ಮೂಲಕ ಅದನ್ನು ಸಾಬೀತು ಪಡಿಸಿದ್ದಾರೆ. 2023ರಲ್ಲಿ ತೆರೆಕಂಡಿದ್ದ ರಜಿನಿಕಾಂತ್ ಅಭಿನಯದ ‘ಜೈಲರ್’ ಬಾಕ್ಸಾಫೀಸ್‌ನಲ್ಲಿ ಹಿಟ್ ಆಗಿತ್ತು. ಕೆಲವೇ ನಿಮಿಷಗಳ ಅತಿಥಿ ಪಾತ್ರದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದರೂ, ರಜಿನಿಕಾಂತ್‌ರಷ್ಟೇ ಶಿಳ್ಳೆ, ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಬಳಿಕ ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ನಲ್ಲಿ ಕೂಡ ಅವರಿಗೆ ಹೆಚ್ಚು ಸ್ಕ್ರೀನ್-ಸ್ಪೇಸ್ ಸಿಕ್ಕಿತ್ತು. ಹೀಗೆ ತಮಿಳಿನಲ್ಲಿ ಭಿನ್ನ ಪಾತ್ರಗಳಲ್ಲಿ ಮಿಂಚಿದ್ದ ಶಿವಣ್ಣ, ಇದೀಗ ತೆಲುಗಿನ ‘ಪೆದ್ದಿ’ಯಲ್ಲೂ ವಿಶೇಷ ಸ್ಟೈಲ್, ಮ್ಯಾನರಿಸಂಗಳಲ್ಲಿ ಗಮನ ಸೆಳೆಯಲು ಸಜ್ಜಾಗಿದ್ದಾರೆ. ರಾವಚರಣ್ ಅಭಿನಯದ, ‘ಉಪ್ಪೇನಾ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ‘ಪೆದ್ದಿ’ ಚಿತ್ರದಲ್ಲಿ ನಟ ಶಿವರಾಜಕುಮಾರ್ ನಟಿಸುತ್ತಿರುವುದು ಗೊತ್ತಿತ್ತು. ಈಗಾಗಲೇ ರಿಲೀಸ್ ಆಗಿದ್ದ ಟೀಸರ್‌ನಲ್ಲಿ ಶಿವಣ್ಣ ಧ್ವನಿ ಮಾತ್ರ ಕೇಳಿಸಿತ್ತು. ಆದರೆ, ಅವರ ಪಾತ್ರದ ಬಗ್ಗೆ ಮಾಹಿತಿ ಇರಲಿಲ್ಲ. ಇದೀಗ ಬಿಡುಗಡೆಗೆ ದಿನಗಣನೆ ಮಾಡುತ್ತಿರುವಾಗಲೇ ‘ಪೆದ್ದಿ’ ತಂಡ ಶಿವಣ್ಣ ಪಾತ್ರ ಪರಿಚಯಿಸಿದ್ದು, ಅವರು ‘ಗೌರ್‌ನಾಯ್ಡು’ ಎಂಬ ಗರಡಿ ಮನೆಯ ನಾಯಕನಾಗಿ (ಉಸ್ತಾದ್) ಕಾಣಿಸಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ವಿಡಿಯೋ ಕೂಡ ಹರಿಬಿಡಲಾಗಿದ್ದು, ರಾಮಚರಣ್ ಹಾಗೂ ಶಿವಣ್ಣ ಗರಡಿ ಮನೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ‘ಪೆದ್ದಿ’ಯಲ್ಲಿ ರಾಮಚರಣ್‌ಗೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಜೋಡಿಯಾಗಿದ್ದಾರೆ. ಶಿವಣ್ಣ, ದಿವ್ಯೇಂದು ಶರ್ಮಾ, ಜಗಪತಿ ಬಾಬು, ಬೊಮನ್ ಇರಾನಿ ಕಲಾಬಳಗದಲ್ಲಿದ್ದಾರೆ. ಇದೇ ಜೂನ್ 4ಕ್ಕೆ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲಿದೆ. ಅದಕ್ಕೂ ಮುನ್ನ ಸೋಮವಾರ (ಮೇ 18) ಮುಂಬೈನಲ್ಲಿ ‘ಪೆದ್ದಿ’ ಟ್ರೇಲರ್ ಬಿಡುಗಡೆಯಾಗಲಿದೆ.