ಮೃಣಾಲ್, ಮಾನಸಾ ಅಲ್ಲ ಶ್ರುತಿ ಫೈನಲ್ !: ‘ಪೆದ್ದಿ’ ವಿಶೇಷ ಸಾಂಗ್‌ನಲ್ಲಿ ರಾಮಚರಣ್ ಜತೆ ಕುಣಿದು ಕುಪ್ಪಳಿಸಿದ ನಟಿ

ಪೆದ್ದಿ ಚಿತ್ರದ ಸಾಂಗ್​ ಪೋಸ್ಟರ್
ಪೆದ್ದಿ ಚಿತ್ರದ ಸಾಂಗ್​ ಪೋಸ್ಟರ್
Published on

ಪ್ರಮುಖ ಮುಖ್ಯಾಂಶಗಳು

  • ಪೆದ್ದಿ ಚಿತ್ರದ ವಿಶೇಷ ಸಾಂಗ್ ರಿಲೀಸ್
  • ರಾಮ್ ಜತೆ ಕುಣಿದು ಕುಪ್ಪಳಿಸಿದ ನಟಿ ಶ್ರುತಿ ಹಾಸನ್​
  • ಇದೇ ಜೂನ್​ 4ಕ್ಕೆ ಪೆದ್ದಿ ಸಿನಿಮಾ ರಿಲೀಸ್
ರಾಮಚರಣ್ ತೇಜಾ, ಶಿವರಾಜಕುಮಾರ್ ನಟಿಸುತ್ತಿರುವ ಬುಚ್ಚಿ ಬಾಬು ಸನಾ ಆ್ಯಕ್ಷನ್-ಕಟ್ ಹೇಳುತ್ತಿರುವ ಸ್ಪೋರ್ಟ್ಸ್ ಡ್ರಾಮಾ ಚಿತ್ರ ‘ಪೆದ್ದಿ’. ಅಂದುಕೊಂಡಂತಾಗಿದ್ದರೆ, ಸಿನಿಮಾ ಏ.30ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಪೋಸ್ಟ್-ಪ್ರೊಡಕ್ಷನ್ ವಿಳಂಬವಾಗಿದ್ದು, ಜತೆಗೆ ಚಿತ್ರತಂಡ ವಿಶೇಷ ಸಾಂಗ್ ಇದ್ದರೆ ಒಳ್ಳೆಯದು ಎಂದು ಅಂತಿಮ ಕ್ಷಣದಲ್ಲಿ ತೀರ್ಮಾನಿಸಿದ್ದ ಕಾರಣ ರಿಲೀಸ್ ಡೇಟ್ ಮುಂದೂಡಲಾಗಿತ್ತು. ಅದರಂತೆ, ಸ್ಪೆಷಲ್ ಸಾಂಗ್ ಶೂಟಿಂಗ್‌ಗೆ ಸಿದ್ಧವಾಗಿದ್ದ ತಂಡ ನಟಿಯರ ಹುಡುಕಾಟಕ್ಕೂ ಮುಂದಾಗಿತ್ತು. ಮೊದಲು ಮೃಣಾಲ್ ಠಾಕೂರ್ ಹೆಸರು ಕೇಳಿಬಂದು, ಅವರು ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿತ್ತು. ‘ಡಕಾಯಿತ್’ ರಿಲೀಸ್ ಬಳಿಕ ಮೃಣಾಲ್ ಹೆಸರು ಹಿನ್ನೆಲೆಗೆ ಸರಿದು ಉದಯೋನ್ಮುಖ ನಟಿ ಮಾನಸಾ ವಾರಾಣಸಿ ಹೆಸರು ಕೇಳಿಬಂತು. ಹಾಗಾದರೆ, ವಿಶೇಷ ಸಾಂಗ್‌ನಲ್ಲಿ ಈ ಇಬ್ಬರಲ್ಲಿ ಯಾರು ಕಾಣಿಸಿಕೊಳ್ಳುವವರು? ಅಥವಾ ಇಬ್ಬರೂ ನಟಿಸಲಿದ್ದಾರಾ ಎಂಬ ಕುತೂಹಲ ಪ್ರೇಕ್ಷಕರಲ್ಲಿತ್ತು. ಆದರೆ, ಇದೀಗ ಈ ಕುತೂಹಲಕ್ಕೆ ತೆರೆಬಿದ್ದಿದ್ದು, ಹಾಡಿನಲ್ಲಿ ಮೃಣಾಲ್, ಮಾನಸಾ ಬದಲು ಶ್ರುತಿ ಹಾಸನ್ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಹೌದು, ಇಂದು ಭೋಪಾಲ್‌ನಲ್ಲಿ ಆಯೋಜಿಸಲಾಗಿರುವ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ವಿಶೇಷ ಸಾಂಗ್ ರಿಲೀಸ್ ಮಾಡಲಾಗಿದ್ದು, ಅದರಲ್ಲಿ ರಾಮಚರಣ್ ಜತೆ ಶ್ರುತಿ ಕುಣಿದು ಕುಪ್ಪಳಿಸಿದ್ದಾರೆ. ರಾಮ್, ಶ್ರುತಿ ಜತೆ ಜಾಹ್ನವಿ ಕಪೂರ್ ಕೂಡ ಮಿಂಚಿದ್ದಾರೆ. ಈ ಹಾಡು ಇಂದು ಹಾಡು ಬಿಡುಗಡೆಯಾಗಿದೆ. ಇನ್ನು ಕನ್ನಡ ಸೇರಿ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ಹಾಡು ರಿಲೀಸ್ ಆಗಿದೆ. ಕನ್ನಡ ಆವೃತ್ತಿಗೆ ವರದರಾಜ್ ಚಿಕ್ಕಬಳ್ಳಾಪುರ ಸಾಹಿತ್ಯ ರಚಿಸಿದ್ದು, ಎ.ಆರ್.ರೆಹಮಾನ್ ಸಂಗೀತಕ್ಕೆ ಗಾಯಕಿ ರಕ್ಷಿತಾ ಸುರೇಶ್ ಧ್ವನಿಯಾಗಿದ್ದಾರೆ. ಇದೇ ಜೂ.4ಕ್ಕೆ ‘ಪೆದ್ದಿ’ ವಿಶ್ವಾದ್ಯಂತ ತೆರೆ ಮೇಲೆ ಬರಲಿದೆ. ಇನ್ನು ಶ್ರುತಿ ಹಾಸನ್ ಈ ಹಿಂದೆ ತೆಲುಗಿನ ‘ಆಗಡು’, ಹಿಂದಿಯ ‘ತೇವರ್’ ಚಿತ್ರಗಳ ವಿಶೇಷ ಸಾಂಗ್‌ನಲ್ಲಿ ಕುಣಿದು ಕುಪ್ಪಳಿಸಿದ್ದರು. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net