ಬೆಟ್ಟಗುಡ್ಡದ ಅರಣ್ಯವನ್ನು ಸಂರಕ್ಷಣೆಗೆ ಸೂಚನೆ; ನವಿಲುಗಳ ಹಾವಳಿ ತಡೆಯಲು ಪರಿಶೀಲನಾ ಸಭೆ

ESHWAR KANDRE congress
Published on

ಬೆಂಗಳೂರು:
ಬೆಟ್ಟಗುಡ್ಡಗಳನ್ನು ಸಂರಕ್ಷಣೆ ಮಾಡಿಕೊಂಡು ಅಲ್ಲಿನ ಅರಣ್ಯ ಉಳಿಸಿಕೊಳ್ಳುವ ಮೂಲಕ ನವಿಲುಗಳು ಊರುಗಳಿಗೆ ಬರುವುದನ್ನು ತಡೆಯಲು ಸಾಧ್ಯವಿದೆ ಎಂದು ಅರಣ್ಯಾಧಿಕಾರಿಗಳು ಸಲಹೆ ನೀಡಿದ್ದಾರೆ.
ನವಿಲುಗಳ ಹಾವಳಿ ತಡೆಯುವ ಬಗ್ಗೆ ಏನೇನು ಕ್ರಮ ತೆಗೆದುಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಅರಣ್ಯ ಸಚಿವರು ಪ್ರಶ್ನೆ ಮಾಡಿರುವ ಹಿನ್ನೆಲೆಯಲ್ಲಿ ಈ ಸಲಹೆಗಳನ್ನು ನೀಡಲಾಗಿದ್ದು, ನವಿಲುಧಾಮ ಪ್ರಾರಂಭಿಸುವ ಬಗ್ಗೆಯೂ ಪರಿಶೀಲನೆ ಮಾಡಿಸಲಾಗುವುದು ಎಂದಿದ್ದಾರೆ. ಈ ನಿಟ್ಟಿನಲ್ಲಿ ಸಲಹೆಗಳ ಪರಿಶೀಲನಾ ಸಭೆಯು ನಡೆಯಲಿದೆ ಎಂದು ಮೂಲಗಳು ಖಚಿತಪಡಿಸಿವೆ.
ಬೆಟ್ಟಗುಡ್ಡದಲ್ಲಿರುವ ಕುರುಚಲು ಅರಣ್ಯದಲ್ಲಿ ನವಿಲುಗಳು ವಾಸಿಸುತ್ತಿದ್ದವು. ಆದರೆ, ಈಗ ನಾನಾ ಕಾರಣಕ್ಕಾಗಿ ಬೆಟ್ಟ ಗುಡ್ಡಗಳಲ್ಲಿ ಗಣಿಗಾರಿಕೆ ಮತ್ತೊಂದು ಮಗದೊಂದು ಮಾಡುತ್ತಿರುವ ಹಿನ್ನೆಲೆಯಲ್ಲಿ ಅವುಗಳು ಸುರಕ್ಷಿತ ನೆಲೆ ಹುಡುಕಿಕೊಂಡು ತೋಟಗಳ ಕಡೆಗೆ ಬರುತ್ತಿವೆ. ಆಹಾರಕ್ಕಾಗಿ ರೈತರ ಜಮೀನಿಗೆ ದಾಳಿ ಮಾಡುತ್ತಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಟ್ಟ ಗುಡ್ಡದಲ್ಲಿ ಹಾವು ಸೇರಿದಂತೆ ಸರಿಸೃಪಗಳನ್ನು ತಿಂದುಕೊಂಡಿದ್ದ ನವಿಲುಗಳನ್ನು ಚಿರತೆಗಳು ಭೇಟೆಯಾಡಿ ತಿನ್ನುತ್ತಿದ್ದವು. ಆದರೆ, ಈಗ ಪರಿಸರದಲ್ಲಿ ಎಲ್ಲವೂ ಏರುಪೇರಾಗಿದ್ದು ಸಮಸ್ಯೆ ಎದುರಾಗಿದೆ ಎಂದು ಸಚಿವರಿಗೆ ವಿವರಣೆ ನೀಡಿದ್ದಾರೆ.
ಬಂಕಾಪುರದಲ್ಲಿ ಮಾತ್ರ ನವಿಲುಗಳ ಧಾಮವಿದೆ. ಹಳೆ ಮೈಸೂರು ಭಾಗದಲ್ಲಿ ನವಿಲುಗಳ ಧಾಮ ಮಾಡಲು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಮುಂದಾಗಿದೆ. ಈ ಬಗ್ಗೆ ತಗಲುವ ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಅರಣ್ಯ ಸಚಿವರು ಸಂಬಂದಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.
ಬೆಟ್ಟಗುಡ್ಡಗಳನ್ನು ಸಂರಕ್ಷಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವಂತೆ ಅರಣ್ಯಾಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net