

ಬಾಳೆಹೊನ್ನೂರು: ಬಹುಜನ್ಮದ ಪುಣ್ಯ ಫಲದಿಂದ ಪ್ರಾಪ್ತವಾದ ಮಾನವ ಜೀವನ ಸಾರ್ಥಕಪಡಿಸಿಕೊಳ್ಳಲು ನಿಜವಾದ ಧರ್ಮ ಪ್ರಜ್ಞೆ ಮತ್ತು ಆಚರಣೆ ಅವಶ್ಯಕ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಶ್ರೀ ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಅಂಗವಾಗಿ ಶುಕ್ರವಾರ ಏರ್ಪಡಿಸಿದ್ದ ಶಿವಾದ್ವೈತ ಧರ್ಮ ಪರಿಷತ್ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಬದುಕಿನ ಜಂಜಡಗಳಲ್ಲಿ ಸಿಲುಕಿರುವ ಮನುಷ್ಯನಿಗೆ ಧರ್ಮದ ನಿಜವಾದ ಅರಿವು ಬಾಳಿಗೆ ಶಾಂತಿ, ಬಲ ತಂದುಕೊಡಬಲ್ಲದು. ಜೀವ ಶಿವನಾಗಲು, ನರ ಹರನಾಗಲು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ಶಿವಾದ್ವೈತ ಜ್ಞಾನ ನಿಜವಾದ ಸಂಪತ್ತಾಗಿದೆ. ನೊಂದ, ಬೆಂದ ಜೀವಾತ್ಮರಿಗೆ ಧರ್ಮದ ದಾರಿ ತೋರಿ ಜೀವನ ಉತ್ಕರ್ಷಕ್ಕೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗ್ರಾಮೀಣಾಭಿ ವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಯುಗಪುರುಷರಾದ ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವಾದ್ವೈತ ಸಿದ್ಧಾಂತ ಪ್ರತಿಷ್ಠಾಪಿಸಿದರು. ಅವರು ಕೊಟ್ಟ ವಿಚಾರಧಾರೆಗಳು ಸರ್ವರಿಗೂ ಅನ್ವಯಿಸುತ್ತವೆ. ಅಂಥ ಪರಮಾಚಾರ್ಯರ ಜಯಂತ್ಯುತ್ಸವ ಸಂದರ್ಭದಲ್ಲಿ ಶಿವಾದ್ವೈತ ಧರ್ಮ ಪರಿಷತ್ ಸಮಾರಂಭ ಉದ್ಘಾಟಿಸುತ್ತಿರುವುದು ಖುಷಿ ತಂದಿದೆ. ರಂಭಾಪುರಿ ಪೀಠದ ಪರಿಸರದಲ್ಲಿ ನಡೆಯುವ ಜನಹಿತ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದ ಸಹಕಾರ ಸದಾ ಇರುತ್ತದೆ ಎಂದರು. ಅ.ಭಾ.ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಮುಕ್ತಿಮಂದಿರದ ವಿಮಲರೇಣುಕ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಸಿಂಧನೂರು-ಕನ್ನೂರಿನ ಸೋಮನಾಥ ಶಿವಾಚಾರ್ಯ ಸ್ವಾಮೀಜಿ ನುಡಿತೋರಣ ಕಟ್ಟಿ ಮಾತನಾಡಿದರು. ಬೆಳಗುಂಪ ಹಿರೇಮಠದ ಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ಆಧ್ಯಾತ್ಮದ ಬೆಳಕಿನ ನುಡಿ ನುಡಿದರು.