

ನವದೆಹಲಿ: ಕಾಂಗ್ರೆಸ್ ಅವನತಿ ಶುರುವಾಗಿದ್ದು 2013ರಲ್ಲಿ. ಆಗ ಶೀಲಾ ದೀಕ್ಷಿತ್ ಅವರೇ ಮುಖ್ಯಮಂತ್ರಿಯಾಗಿದ್ದರು ಎಂದು ಹೇಳುವ ಮೂಲಕ ಪಕ್ಷದ ವಲಯದಲ್ಲಿಯೇ ಅಸಮಾಧಾನ ಮೂಡಿಸಿದ್ದ ಕಾಂಗ್ರೆಸ್ ನಾಯಕ ಪಿಸಿ ಚಾಕೋ ಇದೀಗ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ನಾನು ಶೀಲಾ ದೀಕ್ಷಿತ್ ಹೆಸರನ್ನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಲಾಗಿದೆ. ಶೀಲಾ ಜಿ ಅವರ ಆಡಳಿತದಲ್ಲಿಯೇ ಕಾಂಗ್ರೆಸ್ ಅವನತಿ ಶುರುವಾಗಿತ್ತು ಎಂದು ನಾನು ಹೇಳಲಿಲ್ಲ. 2013, 2014, 2015ರಲ್ಲಿ ಸೋತೆವು. 2017 ರ ಮುನ್ಸಿಪಲ್ ಕಾರ್ಪೋರೇಶನ್ ಚುನಾವಣೆಯಲ್ಲೂ ನಮಗೆ ಸೋಲಾಯಿತು ಎಂದು ಹೇಳಿದರು.
ನನ್ನ ಮಾತುಗಳು ತಪ್ಪಾಗಿ ಬಿಂಬಿತವಾಗಲು ಯಾರು ಕಾರಣ ಎಂಬುದು ನಮಗೆ ಗೊತ್ತು. ನಾನು ಶೀಲಾ ದೀಕ್ಷಿತ್ ಅವರನ್ನು ದೂಷಿಸಿದ್ದೇನೆ ಎಂದು ಉದ್ದೇಶಪೂರ್ವಕವಾಗಿಯೇ ಆರೋಪ ಮಾಡಲಾಗುತ್ತಿದೆ. ಇದು ಮೊದಲಲ್ಲ. ಹಿಂದೆ ಕೂಡ ಇದನ್ನೇ ಮಾಡಲಾಗಿತ್ತು ಎಂದು ತಿಳಿಸಿದರು.
ಇಂದು ಬೆಳಗ್ಗೆ ರಾಜೀನಾಮೆ ನೀಡುವ ವೇಳೆ ಪ್ರತಿಕ್ರಿಯೆ ನೀಡಿದ್ದ ಚಾಕೋ ಅವರು, ಕಾಂಗ್ರೆಸ್ ಸೋಲು ಪ್ರಾರಂಭವಾಗಿದ್ದು ಶೀಲಾ ದೀಕ್ಷಿತ್ ಆಡಳಿತದಲ್ಲಿ ಎಂಬ ಅರ್ಥ ಬರುವಂತೆ ಮಾತನಾಡಿದ್ದರು. (ಏಜೆನ್ಸೀಸ್)