ಸ್ಥಳೀಯ ಸಂಸ್ಥೆಗಳ ನೌಕರರಿಗೆ ಆರ್ಥಿಕ ಇಲಾಖೆಯಿಂದಲೇ ವೇತನ ನೀಡಿ

mahanagara palike protest
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಹಾನಗರ ಪಾಲಿಕೆ ನೌಕರರ ಸಂಘದ ಪದಾಧಿಕಾರಿಗಳು ಶಿವಮೊಗ್ಗ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಎನ್.ಗೋವಿಂದ, ಡಿ.ಮೋಹನ್ ಕುಮಾರ್, ಎಸ್.ಜಿ.ಮಂಜಣ್ಣ, ನಾಗೇಶ್, ಮಧುನಾಯ್ಕ, ಮಾರುತಿ, ರೇಣುಕಮ್ಮ, ಸುಲೇಮಾನ್, ಕುಮಾರ್, ಸಂತೋಷ್, ಕೆ.ಮಂಜಣ್ಣ, ವೆಂಕಟಮ್ಮ, ಲೋಹಿತ್‌ಯಾದವ್, ವಸಂತ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಮಹಾನಗರ ಪಾಲಿಕೆ ಸೇರಿ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ವೇತನ ನೀಡಬೇಕು ಎಂದು ಮಹಾನಗರ ಪಾಲಿಕೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್.ಗೋವಿಂದ ಒತ್ತಾಯಿಸಿದರು.

ಪಾಲಿಕೆ ಸೇರಿ ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ನೌಕರರಿಗೆ ಎಸ್‌ಎಫ್‌ಸಿ ವೇತನ ನಿಧಿಯಲ್ಲಿ ಶೇ.20ರಿಂದ ಶೇ.15ರವರೆಗೆ ಅನುದಾನ ಕಡಿತ ಮಾಡಲಾಗಿದೆ. ವ್ಯತ್ಯಾಸದ ಮೊತ್ತವನ್ನು ಸ್ಥಳೀಯ ಸಂಸ್ಥೆಗಳ ನಿಧಿಯಿಂದಲೇ ಬಳಸಿ ವೇತನ ಪಾವತಿಸುವಂತೆ ಸರ್ಕಾರ ಹೊಸ ಆದೇಶ ಹೊರಡಿಸಿರುವುದು ಸರಿಯಲ್ಲ, ಜನರ ತೆರಿಗೆ ಹಣವನ್ನು ಅಭಿವೃದ್ಧಿಗೆ ಮಾತ್ರ ಬಳಸಬೇಕಾಗುತ್ತದೆ. ಆ ಹಣವನ್ನು ವೇತನವೆಂದು ಪರಿಗಣಿಸುವುದು ಸರಿಯಲ್ಲ. ಆದ್ದರಿಂದ ಈಗಿರುವ ಸರ್ಕಾರದ ಆರ್ಥಿಕ ಇಲಾಖೆಯ ಅನುದಾನದಲ್ಲೇ ವೇತನ ಬಿಡುಗಡೆ ಮಾಡಬೇಕೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ನಮ್ಮ ಪ್ರತಿಭಟನೆಗೆ ಚಾಲನೆ ನೀಡಿದ್ದೇವೆ. ಈಗಾಗಲೇ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ತಿಳಿಸಿದ್ದೇವೆ. ಹಂತ ಹಂತವಾಗಿ ಹೋರಾಟದಲ್ಲಿ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಯುಕ್ತರಿಗೆ ಮನವಿ ನೀಡುತ್ತೇವೆ. ಆದಾದ ನಂತರ ವಿವಿಧ ಸಂಘಟನೆಗಳ ಜತೆಗೂಡಿ ಹೋರಾಟ ಮಾಡಲಿದ್ದು ಸಾರ್ವಜನಿಕರು ಬೆಂಬಲಿಸುವಂತೆ ಮನವಿ ಮಾಡುತ್ತೇವೆ. ಮೇ 25ರವರೆಗೆ ಕರ್ತವ್ಯಕ್ಕೆ ಹಾಜರಾಗಿ ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ ಎಂದರು.

ಪದಾಧಿಕಾರಿಗಳಾದ ಡಿ.ಮೋಹನ್ ಕುಮಾರ್, ಎಸ್.ಜಿ.ಮಂಜಣ್ಣ, ನಾಗೇಶ್, ಮಧುನಾಯ್ಕ, ಮಾರುತಿ, ರೇಣುಕಮ್ಮ, ಸುಲೇಮಾನ್, ಕುಮಾರ್, ಸಂತೋಷ್, ಕೆ.ಮಂಜಣ್ಣ, ವೆಂಕಟಮ್ಮ, ಲೋಹಿತ್‌ಯಾದವ್, ವಸಂತ್‌ಕುಮಾರ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net