ಬಾರಾಮತಿ ನೆಲದಲ್ಲಿ ಪವಾರ್ ಕುಟುಂಬ ಕದನ

maha
Published on

| ರಾಘವ ಶರ್ಮ ನಿಡ್ಲೆ, ನವದೆಹಲಿ

ಮಹಾರಾಷ್ಟ್ರದಲ್ಲಿ 48 ಲೋಕಸಭೆ ಕ್ಷೇತ್ರಗಳಿದ್ದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್​ಸಿಪಿ) ಪವಾರ್ ಕುಟುಂಬದ ಹಿಡಿತದಲ್ಲಿರುವ ಬಾರಾಮತಿ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಇಲ್ಲಿ ಮೊದಲ ಬಾರಿಗೆ ಪವಾರ್ ಕುಟುಂಬಸ್ಥರ ಮಧ್ಯೆಯೇ ಚುನಾವಣಾ ಕದನ ಏರ್ಪಟ್ಟಿದೆ. ಕಳೆದ 3 ಅವಧಿಗಳಿಂದ ಕ್ಷೇತ್ರದ ಸಂಸದೆಯಾಗಿರುವ ಎನ್​ಸಿಪಿ ಹಿರಿಯ ನಾಯಕ ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಲೆ ವಿರುದ್ಧ ಶರದ್ ಪವಾರ್ ಸೋದರಳಿಯ, ಎನ್​ಸಿಪಿ ನಾಯಕ ಅಜಿತ್ ಪವಾರ್ ತಮ್ಮ ಪತ್ನಿ ಸುನೇತ್ರಾ ಪವಾರ್​ರನ್ನೇ ಕಣಕ್ಕಿಳಿಸಿದ್ದಾರೆ.

ಶರದ್ ಪವಾರ್ ನೇತೃತ್ವದ ಎನ್​ಸಿಪಿಯಿಂದ ಹೊರಬಂದು, ಬಹುಪಾಲು ಶಾಸಕರನ್ನೂ ತಮ್ಮೊಂದಿಗೆ ಸೇರಿಸಿಕೊಂಡ ಅಜಿತ್ ಪವಾರ್, ಪಕ್ಷದ ಚಿಹ್ನೆಯನ್ನೂ ತಮ್ಮ ಗುಂಪಿನ ಪಾಲಾಗುವಂತೆ ನೋಡಿಕೊಂಡಿದ್ದಾರೆ. ಶರದ್ ಪವಾರ್ ನೇತೃತ್ವದ ಎನ್​ಸಿಪಿಗೆ ಬೇರೆ ಚಿಹ್ನೆಯನ್ನು ನೀಡಲಾಗಿದೆ. ಬಾರಾಮತಿಯಲ್ಲಿ ಪವಾರ್ ಕುಟುಂಬವನ್ನು ಸೋಲಿಸಬೇಕೆಂದು ಬಿಜೆಪಿ ಹಲವು ಬಾರಿ ಯತ್ನಿಸಿದ್ದರೂ, ಮತದಾರರು ಪವಾರ್ ಕುಟುಂಬವನ್ನು ಬಿಟ್ಟುಕೊಟ್ಟಿರಲಿಲ್ಲ. ರಾಜಕೀಯ ಭವಿಷ್ಯಕ್ಕಾಗಿ ಕುಟುಂಬ ಬಾಂಧವ್ಯ ತೊರೆದು, ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಸೇರಿಕೊಂಡಿರುವ ಅಜಿತ್ ಪವಾರ್, ಮಾವನ ಮಗಳನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದಾರೆ. ಬಾರಾಮತಿಯಲ್ಲಿ ಬಿಜೆಪಿ ಕೂಡ ಇದನ್ನೇ ಬಯಸಿರುವುದು ಸುಳ್ಳಲ್ಲ.

1985ರಿಂದ ಒಂದೆರಡು ಚುನಾವಣೆಗಳನ್ನು ಹೊರತುಪಡಿಸಿದರೆ ಬಾರಾಮತಿಯಲ್ಲಿ ಶರದ್ ಪವಾರ್ ಕುಟುಂಬಸ್ಥರೇ ಚುನಾವಣೆ ಗೆಲ್ಲುತ್ತಿದ್ದಾರೆ. ಮತದಾರರಿಗೂ ಪವಾರ್ ಕುಟುಂಬದ ಬಗ್ಗೆ ಭಾವನಾತ್ಮಕ ಒಲವಿದೆ. ಪವಾರ್ ಕುಟುಂಬದ ಹಿರಿಯಜ್ಜ ಶರದ್ ಪವಾರ್ ಬಗ್ಗೆಯಂತೂ ಜನರಿಗೆ ವಿಶೇಷ ಅಭಿಮಾನ, ಪ್ರೀತಿಯಿದೆ. ದೇಶದ ಭೂಪಟದಲ್ಲಿ ಬಾರಾಮತಿ ಪ್ರಮುಖ ಸ್ಥಾನ ಪಡೆಯುವಂತೆ ಮಾಡಲು ಶರದ್ ಪವಾರ್ ಕೊಡುಗೆ ದೊಡ್ಡದಿದೆ. ಹೀಗಾಗಿ, ಪವಾರ್ ಬಳಿಕ ಪುತ್ರಿ ಸುಪ್ರಿಯಾ ಅವರನ್ನೂ ಮತದಾರರು ಸತತ ಮೂರು ಬಾರಿ ಗೆಲ್ಲಿಸಿದ್ದಾರೆ. ಪುಣೆ ಜಿಲ್ಲೆ ವ್ಯಾಪ್ತಿಯಲ್ಲಿರುವ ಬಾರಾಮತಿಯ ಆಡಳಿತ ಹಾಗೂ ರಾಜಕೀಯದ ಮೇಲೆ ಅಜಿತ್ ಮತ್ತು ಶರದ್ ಪವಾರ್ ಇಬ್ಬರೂ ಪ್ರಭಾವ ಹೊಂದಿದ್ದಾರೆ. ಹೀಗಿರುವಾಗ, ಮತದಾರರು ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿ ಸಿಲುಕಿದ್ದಾರೆ.

1967ರಲ್ಲಿ ಶಾಸಕರಾದ ಪವಾರ್

1967ರಲ್ಲಿ ಶರದ್ ಪವಾರ್ 27ನೇ ವಯಸ್ಸಿನಲ್ಲಿ ಬಾರಾಮತಿಯಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಇಂದಿನವರೆಗೂ ಈ ವಿಧಾನಸಭಾ ಸ್ಥಾನ ಪವಾರ್ ಕುಟುಂಬದ ಕೈಯಲ್ಲಿದೆ. ಪವಾರ್ 1967ರಿಂದ 1991ರವರೆಗೆ ಇಲ್ಲಿಂದ ಶಾಸಕರಾಗಿದ್ದರು. 1984ರಲ್ಲಿ ಬಾರಾಮತಿ ಲೋಕಸಭೆ ಚುನಾವಣೆ ಸ್ಪರ್ಧಿಸಿ ಗೆದ್ದಿದ್ದರು. 1991ರಲ್ಲಿ ಉಪ ಚುನಾವಣೆಯಲ್ಲೂ ಸ್ಪರ್ಧಿಸಿ, ಸಂಸತ್ ಪ್ರವೇಶಿಸಿದ್ದರು. 1991ರಲ್ಲಿ ಅಜಿತ್ ಪವಾರ್ ಬಾರಾಮತಿ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. ಅಂದಿನಿಂದ ಇಂದಿನವರೆಗೂ ಅವರು ಬಾರಾಮತಿ ಶಾಸಕರಾಗಿದ್ದಾರೆ. ಅಂದರೆ, 1991ರ ನಂತರ, ಶರದ್ ಪವಾರ್ ಬಾರಾಮತಿ ವಿಧಾನಸಭೆ ಕ್ಷೇತ್ರವನ್ನು ಅಜಿತ್​ಗೆ ಹಸ್ತಾಂತರಿಸಿದ್ದರು. ಹಿರಿಯ ಪವಾರ್ ರಾಷ್ಟ್ರ ರಾಜಕೀಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. 1996ರಿಂದ 2009ರವರೆಗೆ ಶರದ್ ಪವಾರ್ ಇಲ್ಲಿಂದ ಸಂಸದರಾಗಿದ್ದರು.

ಕುತೂಹಲ ಮೂಡಿಸಿದ ಸ್ಪರ್ಧೆ

ಬಾರಾಮತಿಯಲ್ಲಿ ಶರದ್ ಪವಾರ್ ನೇತೃತ್ವದ ಎನ್​ಸಿಪಿಗೆ ಸೋಲಾದರೆ ಹಿರಿಯ ಪವಾರ್ ನೇತೃತ್ವದ ಗುಂಪಿನ ಜಂಘಾಬಲವೇ ಉಡುಗಲಿದೆ. ಆದರೆ ಅದು ಅಷ್ಟೊಂದು ಸುಲಭವೇನಲ್ಲ. 2009ರಲ್ಲಿ ಇಲ್ಲಿ ಬಿಜೆಪಿ ಅಭ್ಯರ್ಥಿ ಕಾಂತಾ ನಾಲವಡೆ ವಿರುದ್ಧ 4,87,827 ಮತ ಪಡೆದಿದ್ದ ಸುಪ್ರಿಯಾ ಸುಲೆ, 3.3 ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಆದರೆ ಸುಲೆಯವರಿಗೆ 2014ರಲ್ಲಿ ಕಠಿಣ ಸ್ಪರ್ಧೆ ಕಾದಿತ್ತು. ಎನ್​ಡಿಎ ಮಿತ್ರಪಕ್ಷ ರಾಷ್ಟ್ರೀಯ ಸಮಾಜ ಪಾರ್ಟಿಯ (ಆರ್​ಎಸ್​ಪಿಎಸ್) ಅಭ್ಯಥಿ ಮಹಾದೇವ ಜಗನ್ನಾಥ್ ಜಾಂಕರ್ ಎದುರು ಗೆಲುವಿಗಾಗಿ ಭಾರೀ ಬೆವರಿಳಿಸಿದ್ದ ಸುಪ್ರಿಯಾ, ಕೇವಲ 70 ಸಾವಿರ ಮತಗಳಲ್ಲಿ ವಿಜಯಿಯಾಗಿದ್ದರು. ಸುಲೆ (5,21,562 ಮತ) ಶೇ.48, ಜಾಂಕರ್ (4,51,843) ಶೇ.42ರಷ್ಟು ಮತ ಬಾಚಿಕೊಂಡಿದ್ದರು. 2019ರಲ್ಲಿ ಬಿಜೆಪಿ ಮಹಿಳಾ ಅಭ್ಯರ್ಥಿ ಕಾಂಚನ್ ರಾಹುಲ್ ಕುಲ್​ರನ್ನು ಕಣಕ್ಕಿಳಿಸಿತ್ತು. ಆದರೆ, ಸುಪ್ರಿಯಾ 1.25 ಲಕ್ಷ ಮತಗಳಿಂದ ಗೆದ್ದಿದ್ದರು.

ಈ ಬಾರಿ ಸುನೇತ್ರಾ ಪವಾರ್ ಸ್ಪರ್ಧಿಸುತ್ತಿರುವುದರಿಂದ ಇಷ್ಟು ವರ್ಷಗಳ ಕಾಯುವಿಕೆ ಕೊನೆಯಾಗಬಹುದು ಎಂಬ ನಿರೀಕ್ಷೆ ಬಿಜೆಪಿಯದ್ದು. ‘ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಳನ್ನು ಗಮನಿಸಿ ಜನ ನನ್ನನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆ ಇದೆ. ಸುನೇತ್ರಾ ಪವಾರ್ ನನ್ನ ತಾಯಿ ಇದ್ದಂತೆ. ಬಿಜೆಪಿ ನಮ್ಮ ಕುಟುಂಬದಲ್ಲಿ ಒಡಕು ಮೂಡಿಸುವ ಕುತಂತ್ರ ಮಾಡುತ್ತಿದೆ’ ಎಂದು ಸುಪ್ರಿಯಾ ಆರೋಪಿಸಿದ್ದಾರೆ.

ಅಜಿತ್ ಪವಾರ್ ಅವರು ‘ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು, ಅಭಿವೃದ್ಧಿಗೆ ಮತ ನೀಡಿ’ ಎಂದು ಪ್ರಚಾರ ಮಾಡುತ್ತಿದ್ದರೆ, ಶರದ್ ಪವಾರ್ ಕ್ಷೇತ್ರದ ಜತೆಗಿನ ತಮ್ಮ ಭಾವನಾತ್ಮಕ ಸಂಬಂಧಗಳನ್ನು ಪ್ರಸ್ತಾಪಿಸುತ್ತ ಜನರನ್ನು ಸೆಳೆಯುವ ತಂತ್ರ ಅನುಸರಿಸಿದ್ದಾರೆ. ಅಜಿತ್ ಪವಾರ್ ಸೋದರ ಮತ್ತು ಇತರ ಕೆಲ ಕುಟುಂಬಸ್ಥರು ಸುಪ್ರಿಯಾರನ್ನು ಬೆಂಬಲಿಸುತ್ತಿರುವುದು ಕೂಡ ಗಮನಾರ್ಹ. ಬಾರಾಮತಿಯಲ್ಲಿ ಒಟ್ಟು 6 ವಿಧಾನಸಭೆ ಕ್ಷೇತ್ರಗಳಿದ್ದು, ಬಿಜೆಪಿ, ಕಾಂಗ್ರೆಸ್ ಮತ್ತು ಎನ್​ಸಿಪಿ ಸಮಾನವಾಗಿ ತಲಾ 2 ಕ್ಷೇತ್ರಗಳಲ್ಲಿ ಶಾಸಕರನ್ನು ಹೊಂದಿವೆ. ಹೀಗಾಗಿ, ಬಿರುಸಿನ ರಾಜಕೀಯ ಸಂಘರ್ಷಕ್ಕೆ ಇದು ಸಾಕ್ಷಿಯಾಗಿದೆ.

ಚುನಾವಣೆಯ 2ನೇ ಹಂತದ ಬಹಿರಂಗ ಪ್ರಚಾರ ಅಂತ್ಯ

ನವದೆಹಲಿ: ಲೋಕಸಭಾ ಚುನಾವಣೆಯ ಎರಡನೇ ಹಂತದ ಬಹಿರಂಗ ಪ್ರಚಾರ ಬುಧವಾರ ಸಂಜೆ ಮುಕ್ತಾಯಗೊಂಡಿತು. ಬಿರು ಬಿಸಿಲನ್ನು ಲೆಕ್ಕಿಸದೆ ಕೊನೆಯ ದಿನ ಎಲ್ಲ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿದವು. ಇಂದು (ಗುರುವಾರ) ಅಭ್ಯರ್ಥಿಗಳು ಮನೆ-ಮನೆಗೆ ತೆರಳಿ ಪ್ರಚಾರ ನಡೆಸಲು ಅವಕಾಶವಿದೆ.

ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರ ಸೇರಿದಂತೆ 12 ರಾಜ್ಯಗಳ 89 ಕ್ಷೇತ್ರಗಳಲ್ಲಿ ಶುಕ್ರವಾರ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಎಲ್ಲ ಪೂರಕ ಕ್ರಮಗಳನ್ನು ಕೈಗೊಂಡಿದ್ದು, ಪೂರ್ವಸಿದ್ಧತೆಗಳನ್ನೂ ಪರಿಶೀಲಿಸಿದೆ. ಭದ್ರತೆಗಾಗಿ ಪೊಲೀಸರು ಹಾಗೂ ಅರೆ ಸೇನಾಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಎರಡನೇ ಹಂತದಲ್ಲಿ ಕೇರಳದ 20, ಕರ್ನಾಟಕದ 14, ರಾಜಸ್ಥಾನದ 13, ಉತ್ತರಪ್ರದೇಶದ 8, ಮಹಾರಾಷ್ಟ್ರದ 8, ಮಧ್ಯಪ್ರದೇಶದ 6, ಅಸ್ಸಾಂನ 5 ಲೋಕಸಭಾ ಕ್ಷೇತ್ರ ಸೇರಿದಂತೆ 89 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಚುನಾವಣೆಯ ಮೊದಲ ಹಂತದಲ್ಲಿ ಏಪ್ರಿಲ್ 19ರಂದು 102 ಕ್ಷೇತ್ರಗಳಲ್ಲಿ ಮತದಾನ ನಡೆಯಿತು. ಮತದಾನ ಪ್ರಮಾಣ ಶೇಕಡ 65.5ರಷ್ಟು ದಾಖಲಾಯಿತು. ಬಿಸಿಲಿನ ತಾಪದ ಕಾರಣ ವೋಟಿಂಗ್ ಪ್ರಮಾಣ ಕಡಿಮೆಯಾಗಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಿರುವ ಚುನಾವಣಾ ಆಯೋಗ ಚುನಾವಣೆಯ ಎರಡನೇ ಹಂತದಲ್ಲಿ ಬಿಸಿಲ ಪ್ರಕೋಪ ಹೆಚ್ಚು ಇರುವ ಪ್ರದೇಶಗಳ ಮತಗಟ್ಟೆಗಳಲ್ಲಿ ಸೂಕ್ತ ನೆರಳಿನ ವ್ಯವಸ್ಥೆ, ಕುಡಿಯುವ ನೀರು ಕಲ್ಪಿಸಲು ಮುಂದಾಗಿದೆ. ಮೂರನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net