

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್ ಆಪ್ತೆ ಪವಿತ್ರಾ ಗೌಡ ಬಂಧನವಾದ 72 ದಿನಗಳ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 22ರಂದು ವಿಚಾರಣೆ ನಡೆಯಲಿದೆ.
ಜಾಮೀನು ಕೋರಿ ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ಗೆ ಪವಿತ್ರಾ ಗೌಡ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ಪವಿತ್ರಾ ಗೌಡ ಜೊತೆಗೆ ಪ್ರಕರಣದ ಏಳನೇ ಆರೋಪಿಯಾಗಿರುವ ಅನುಕುಮಾರ್ ಕೂಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ (ಆಗಸ್ಟ್ 19) ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಆಗಸ್ಟ್ 22ಕ್ಕೆ ಮುಂದೂಡಿದೆ.
ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್ಗೆ ನ್ಯಾಯಾಲಯ ಆಗಸ್ಟ್ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 200ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶೇ. 70ರಷ್ಟು ಸಾಕ್ಷ್ಯಗಳ ಎಫ್ಎಸ್ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಇನ್ನುಳಿದ ಸಾಕ್ಷ್ಯಗಳ ಎಫ್ಎಸ್ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಹೈದರಾಬಾದ್ಗೆ ಕಳಿಸಲಾಗಿರುವ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಉಪಕರಣಗಳು, ಸಿಸಿ ಕ್ಯಾಮೆರಾ, ಆಡಿಯೋ ಸ್ಯಾಂಪಲ್ಸ್, ಮೊಬೈಲ್ ಡೇಟಾ ರಿಪೋರ್ಟ್ ಎಫ್ಎಸ್ಎಲ್ ವರದಿಗಳು ಮಾತ್ರವೇ ಬರಬೇಕಿದೆ. ಇನ್ನು 30% ವರದಿಗಳು ಮಾತ್ರವೇ ಬರಬೇಕಿದ್ದು, ಈ ವರದಿಗಳು ಪೊಲೀಸರ ಕೈ ಸೇರಿದ ನಂತರ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ.