

ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಬರ್ಬರ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ (Pavithra Gowda) ಮತ್ತು ಎ2 ಆರೋಪಿ ದರ್ಶನ್ ಸೇರಿದಂತೆ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್ ಡಿ.13ರಂದು ಜಾಮೀನು ಮಂಜೂರು ಮಾಡಿತು. ದರ್ಶನ್ ಹೊರಬಂದಿದ್ದೇ ಆದರೂ ಪವಿತ್ರಾ ಮಾತ್ರ ಇನ್ನೂ ಹೊರಗೆ ಬಂದಿಲ್ಲ. ಸೋಮವಾರ (ಡಿ.16) ಬಿಡುಗಡೆಯಾಗಬೇಕಿತ್ತು. ಆದರೆ, ಆರೋಪಿಗೆ ಜಾಮೀನು ಸಿಕ್ಕರೂ ಬಿಡುಗಡೆ ಭಾಗ್ಯ ಮಾತ್ರ ಇಂದೂ ಕೂಡ ದೊರೆತಿಲ್ಲ.
ಕೋರ್ಟ್ ನೀಡಿದ ಜಾಮೀನು ಪ್ರತಿಯನ್ನು ಇಂದು ಸಂಜೆ 6 ಗಂಟೆಯೊಳಗೆ ಜೈಲು ಅಧಿಕಾರಿಗಳಿಗೆ ಹಸ್ತಾಂತರಿಸಬೇಕಿತ್ತು. ಆದ್ರೆ, ನಿಗದಿಪಡಿಸಿದ ಅವಧಿಗಿಂತ ಹೆಚ್ಚಿನ ಸಮಯ ತಗೆದುಕೊಂಡ ಹಿನ್ನೆಲೆ ಪವಿತ್ರಾ ಬಿಡುಗಡೆ ಭಾಗ್ಯವನ್ನು ಜೈಲು ಅಧಿಕಾರಿಗಳು ನಾಳೆಗೆ ಮುಂದೂಡಿದ್ದಾರೆ.
ನಾಳೆ ಬೆಳಗ್ಗೆ ಸುಮಾರು 9 ಗಂಟೆಗೆ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಿಂದ ರಿಲೀಸ್ ಆಗಲಿದ್ದಾರೆ. ಆದರೆ, ಇದೊಂದು ರಾತ್ರಿ ಮಾತ್ರ ಜೈಲೂಟ ಗ್ಯಾರಂಟಿಯಾಗಿದೆ.