ಪಾವಗಡದಲ್ಲಿ ರಂಗೇರಿದ ಚುನಾವಣಾ ಕಾವು

Published on

ತುಮಕೂರು: ಸೋಲಾರ್ ಪಾರ್ಕ್‌ನಿಂದಾಗಿ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿರುವ ಪಾವಗಡದಲ್ಲಿ ಚುನಾವಣಾ ಕಣ ರಂಗೇರಿದೆ. ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಪಾವಗಡ ಅತ್ಯಂತ ಹಿಂದುಳಿದ ತಾಲೂಕು. ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಇದು ಎಸ್‌ಸಿ ಮೀಸಲು ಕ್ಷೇತ್ರವಾಗಿದೆ.

ಆಂಧ್ರ ಶೈಲಿಯ ರಾಜಕಾರಣದ ಪ್ರಭಾವವಿದ್ದು, ನಕ್ಸಲ್ ಚಟುವಟಿಕೆಯ ಕುಖ್ಯಾತಿಯೂ ಇಲ್ಲಿವೆ. ಸಮಸ್ಯೆಗಳನ್ನೇ ಹಾಸಿ-ಹೊದ್ದು ಮಲಗಿದ್ದರೂ ಕ್ಷೇತ್ರದಲ್ಲಿ ಚುನಾವಣಾ ರಾಜಕಾರಣ ವಿಭಿನ್ನವಾಗಿರಲಿದೆ. ಇತ್ತೀಚಿನವರೆಗೂ ಮಟ್ಕಾ ದಂಧೆಯೇ ತಾಲೂಕು ರಾಜಕಾರಣವನ್ನು ನಿಯಂತ್ರಿಸಿರುವುದನ್ನು ಅಲ್ಲಗಳೆಯಲಾಗದು.

2008ರಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯದ ಬಾವುಟ ಹಾರಿಸಿ ಗೆದ್ದಿದ್ದ ವೆಂಕಟರವಣಪ್ಪ ಅದೃಷ್ಟದಾಟದಲ್ಲಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ಮತ್ತೆ ಕೈ ಹಿಡಿದಿದ್ದರು. ಪ್ರಸ್ತುತ ಕಾಂಗ್ರೆಸ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿರುವ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಪರವಾಗಿ ನೆರೆಯ ಕ್ಷೇತ್ರಗಳ ಕೆಲವು ಪ್ರಮುಖ ಮುಖಂಡರೇ ಲಾಬಿ ನಡೆಸುತ್ತಿರುವುದು ಪಾವಗಡದಲ್ಲಿ 2008ರ ಇತಿಹಾಸ ಮರುಕಳಿಸುವ ಸಾಧ್ಯತೆ ಬಗ್ಗೆ ಗುಸುಗುಸು ಕೇಳಿಬರುತ್ತಿದೆ.

ಕಾಂಗ್ರೆಸ್ ಟಿಕೆಟ್ ಬಯಸಿ ಎಚ್. ವಿ.ವೆಂಕಟೇಶ್, ಗಾಯತ್ರಿಬಾಯಿ, ಕೃಷ್ಣಾನಾಯ್ಕಾ, ರಾಮಚಂದ್ರಪ್ಪ, ಕೆಂಚಮಾರಯ್ಯ ಕೂಡ ಅರ್ಜಿ ಸಲ್ಲಿಸಿದ್ದಾರೆ. ಪಾವಗಡಕ್ಕೆ ಕುಡಿಯುವ ನೀರು ಪೂರೈಸುವ ಶಾಶ್ವತ ನೀರಾವರಿ ಯೋಜನೆಯನ್ನು ಬಿಜೆಪಿ ಸರ್ಕಾರ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿದ್ದು, ಪಾವಗಡದಲ್ಲಿ ಪ್ರಬಲ ಪೈಪೋಟಿ ನೀಡಲು ರಾಜಕೀಯ ತಂತ್ರಗಾರಿಕೆ ನಡೆಸಿದೆ. ಇದರ ಲಾಫಲ ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯ ನಂತರ ತಿಳಿಯಲಿದೆ.

ಆದರೆ, ಕ್ಷೇತ್ರದಲ್ಲಿ ವೆಂಕಟರವಣಪ್ಪ ಪ್ರಾಬಲ್ಯವಿದ್ದು ಅವರ ವಿರುದ್ಧ ಜೆಡಿಎಸ್‌ನ ಕೆ.ಎಂ.ತಿಮ್ಮರಾಯಪ್ಪ ಸ್ಪರ್ಧೆಗಿಳಿಯುವುದು ಖಚಿತವಾಗಿದೆ. ಕಾಂಗ್ರೆಸ್‌ನಲ್ಲಿ ಟಿಕೆಟ್ ವಿಷಯದಲ್ಲಿ ಗೊಂದಲವಾದರೆ ಅದರ ಲಾಭ ಪಡೆಯಲು ಬಿಜೆಪಿ ಕಾಯುತ್ತಿದೆ. ಅದಾಗದಿದ್ದರೆ ಕಾಂಗ್ರೆಸ್, ಜೆಡಿಎಸ್ ನಡುವೆಯೇ ನೇರಫೈಟ್ ಫಿಕ್ಸ್. ಸೋಲಾರ್‌ಪಾರ್ಕ್ ನಂತಹ ಬಹುದೊಡ್ಡ ಯೋಜನೆಯನ್ನು ತಂದು ತಮ್ಮದೇ ಅಂತ ಬಿಂಬಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೂ ಪಾವಗಡ ಮೇಲೆ ವಿಶೇಷ ಆಸಕ್ತಿಯಿದ್ದು, ಅವರಿಗೆ ಬೇಕಾದ ವ್ಯಕ್ತಿಯನ್ನು ಕಣಕ್ಕಿಳಿಸಲು ಉತ್ಸಕರಾಗಿದ್ದಾರೆ ಎನ್ನಲಾಗಿದೆ.

ಈ ನಡುವೆ ಡಾ.ಜಿ.ಪರಮೇಶ್ವರ್ ಮಾತ್ರ ವೆಂಕಟರಮಣಪ್ಪ ಪರವಾಗಿದ್ದಾರೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯವರೇ ಮೇಲುಗೈ, ನಂತರದ ಸ್ಥಾನದಲ್ಲಿರುವ ನಾಯಕರು ನಿರ್ಣಾಯಕರೆನಿಸಿದ್ದಾರೆ. ಕಾಡುಗೊಲ್ಲರು, ಕುಂಚಿಟಿಗರು, ಕುರುಬರು, ಮುಸ್ಲಿಮರು, ಕಮ್ಮ ಒಕ್ಕಲಿಗ, ರೆಡ್ಡಿ ಸಮುದಾಯದ ಮತದಾರರೂ ಇಲ್ಲಿದ್ದಾರೆ.

ಬಿಜೆಪಿಯಲ್ಲಿ ನಾಯಕತ್ವದ ಕೊರತೆ": ಚಿತ್ರದುರ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಾವಗಡದಲ್ಲಿ ಬಿಜೆಪಿಗೆ ಬಲವೇ ಇಲ್ಲ. ಜನತಾ ಪರಿವಾರದ ಮಾಜಿ ಶಾಸಕ ಸೋಮ್ಲಾನಾಯಕ್ 2013ರಲ್ಲಿ ಬಿಜೆಪಿ ತೊರೆದ ನಂತರವಂತೂ ಕ್ಷೇತ್ರದಲ್ಲಿ ಪೈಪೋಟಿ ನೀಡಬಲ್ಲ ಸಮರ್ಥ ನಾಯಕರೇ ಇಲ್ಲದಂತಾಗಿದೆ. ಪ್ರತಿ ಚುನಾವಣೆಯಲ್ಲಿಯೂ ಹೊಸ ಆಕಾಂಕ್ಷಿಗಳು ಹುಟ್ಟಿಕೊಳುತ್ತಿದ್ದಾರೆ. ಕೊತ್ತೂರು ಹನುಮಂತರಾಯಪ್ಪ, ವಕೀಲ ಕೃಷ್ಣನಾಯ್ಕ ಮತ್ತಿತರರ ಹೆಸರು ಈ ಬಾರಿ ಚರ್ಚೆಯಾಗುತ್ತಿವೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕೂಡ ಪಾವಗಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದು ಅವರ ಆಪ್ತರನ್ನು ಕಣಕ್ಕಿಳಿಸಿ ಕನಿಷ್ಠ ತ್ರಿಕೋನ ಸ್ಪರ್ಧೆಗಾದರೂ ಪಕ್ಷವನ್ನು ತರುವ ಚಿಂತನೆಯಲ್ಲಿದ್ದಾರೆ.

ಜೆಡಿಎಸ್‌ನಲ್ಲಿ ಪ್ರಚಾರ ಶುರು: ದಲಿತ ಎಡಗೈ ಸಮುದಾಯದ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ ಅಭ್ಯರ್ಥಿ ಎಂದು ಘೋಷಿಸಿರುವುದರಿಂದ ಕ್ಷೇತ್ರದಲ್ಲಿ ಯಾವುದೇ ಗೊಂದಲವಿಲ್ಲದೆ ಕಾರ್ಯಕರ್ತರು ಪ್ರಚಾರ ಶುರುವಿಟ್ಟುಕೊಂಡಿದ್ದಾರೆ. ಕ್ಷೇತ್ರದಲ್ಲಿ ಸತತವಾಗಿ ಎರಡು ಬಾರಿ ಯಾರೊಬ್ಬರೂ ಗೆದ್ದ ಇತಿಹಾಸವಿಲ್ಲದ ಕಾರಣದಿಂದ ಈ ಚುನಾವಣೆಯಲ್ಲಿ ಫಲಿತಾಂಶ ಜೆಡಿಎಸ್ ಪರವಾಗಿರಲಿದೆ ಎಂಬ ಆಶಾಭಾವನೆಯಿಂದ ಅನ್ಯಪಕ್ಷಗಳಲ್ಲಿ ಅಸಮಾಧಾನಿತರಾಗಿರುವ ಮುಖಂಡರನ್ನು ಪಕ್ಷಕ್ಕೆ ಸೆಳೆದು ಬಲವರ್ಧನೆ ಮಾಡಿಕೊಳ್ಳುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಪಕ್ಷಗಳ ಸಿದ್ಧತೆ:

ಕಾಂಗ್ರೆಸ್: •ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ •ಪ್ರಮುಖ ಮುಖಂಡರ ಜತೆ ಸಭೆ •ಜಿಲ್ಲಾ ಮಟ್ಟದ ಸಮಾವೇಶಕ್ಕೆ ಕಾರ್ಯಕರ್ತರು ಭಾಗಿ

ಜೆಡಿಎಸ್: •ಅಭ್ಯರ್ಥಿಯಾಗಿ ಕೆ.ಎಂ.ತಿಮ್ಮರಾಯಪ್ಪ ಘೋಷಣೆ •ಕಳೆದ 6 ತಿಂಗಳಿನಿಂದಲೂ ಮನೆಮನೆ ಪ್ರಚಾರ • ಸ್ಥಳೀಯ ಸಭೆಗಳು

ಬಿಜೆಪಿ: •ವಿಜಯ ಸಂಕಲ್ಪ ಅಭಿಯಾನ ಕಾರ್ಯಕರ್ತರ ಸಭೆಗಳು •ಕಾರ್ಯಕರ್ತರ ಮನೆಮನೆ ಭೇಟಿ

ಜಾತಿವಾರು ಲೆಕ್ಕಾ ಚಾರ (ಅಂದಾಜು)

ಪರಿಶಿಷ್ಟ ಜಾತಿ 65 ಸಾವಿರ ಪರಿಶಿಷ್ಟ ಪಂಗಡ 40 ಸಾವಿರ ಕಾಡುಗೊಲ್ಲರು 25 ಸಾವಿರ ಕುರುಬರು 15 ಸಾವಿರ ಒಕ್ಕಲಿಗರು 10 ಸಾವಿರ ಮುಸ್ಲಿಂ 14 ಸಾವಿರ ಬಲಿಜ 8 ಸಾವಿರ ಇತರ 20397 ಸಾವಿರ

2018ರ ಚುನಾವಣೆ ಲಿತಾಂಶ

ಅಭ್ಯರ್ಥಿ ಪಕ್ಷ ಪಡೆದ ಮತ ವೆಂಕಟರವಣಪ್ಪ ಕಾಂಗ್ರೆಸ್ 72974 ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ 72565 ಗೆಲುವಿನ ಅಂತರ 409

2013ರ ಚುನಾವಣೆ ಲಿತಾಂಶ

ಅಭ್ಯರ್ಥಿ ಪಕ್ಷ ಪಡೆದ ಮತ ಕೆ.ಎಂ. ತಿಮ್ಮರಾಯಪ್ಪ ಜೆಡಿಎಸ್ 68686 ಎಚ್.ವಿ.ವೆಂಕಟೇಶ್ ಕಾಂಗ್ರೆಸ್ 63823 ಜಿ.ವಿ.ವಿಜಯರಾಜ್ ಬಿಜೆಪಿ 5327

2008ತ ಚುನಾವಣೆ ಲಿತಾಂಶ

ವೆಂಕಟರವಣಪ್ಪ ಕಾಂಗ್ರೆಸ್ (ಬಂಡಾಯ) 43518 ಕೆ.ಎಂ.ತಿಮ್ಮರಾಯಪ್ಪ ಜೆಡಿಎಸ್ 29238 ಸೋಮ್ಲಾನಾಯ್ಕ ಬಿಜೆಪಿ 26283 ಗಾಯತ್ರಿದೇವಿ ಕಾಂಗ್ರೆಸ್ 21366

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net