ಪಾವಗಡದಲ್ಲಿ ಕಾಂಗ್ರೆಸ್, ಜೆಡಿಎಸ್ ಜಿದ್ದಾಜಿದ್ದಿ

Vijayavani Halachal
Published on

ಸೋರಲಮಾವು ಶ್ರೀಹರ್ಷ ತುಮಕೂರು: ಡಾ.ಡಿ.ಎಂ.ನಂಜುಂಡಪ್ಪ ವರದಿ ಪ್ರಕಾರ ಪಾವಗಡ ಅತ್ಯಂತ ಹಿಂದುಳಿದ ತಾಲೂಕು. ನೆರೆಯ ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಪಾವಗಡ ಮೀಸಲು ಕ್ಷೇತ್ರದ ಮೇಲೆ ಆಂಧ್ರ ಶೈಲಿಯ ರಾಜಕಾರಣದ ಪ್ರಭಾವವಿದೆ.

ನಕ್ಸಲ್ ಚಟುವಟಿಕೆಯ ಹೆಜ್ಜೆ ಗುರುತುಗಳೂ ಇಲ್ಲಿವೆ. ಸಮಸ್ಯೆಗಳನ್ನೇ ಹಾಸು-ಹೊದ್ದು ಕೊಂಡು ಮಲಗಿದ್ದರೂ ಕ್ಷೇತ್ರದಲ್ಲಿ ಚುನಾವಣಾ ರಾಜಕಾರಣ ಮಾತ್ರ ವಿಭಿನ್ನವಾಗಿರಲಿದೆ.

2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ವೆಂಕಟರವಣಪ್ಪ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ, ನಂತರದ ರಾಜಕೀಯ ಬೆಳವಣಿಗೆಯಲ್ಲಿ ವೆಂಕಟರವಣಪ್ಪ ರಾಜಕೀಯ ನಿವೃತ್ತಿ ಪಡೆದು ಪುತ್ರ ಎಚ್.ವಿ.ವೆಂಕಟೇಶ್‌ಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

2013ರ ಚುನಾವಣೆಯಲ್ಲಿ ವೆಂಕಟರವಣಪ್ಪಗೆ ಟಿಕೆಟ್ ‘ಕೈ’ತಪ್ಪಿತ್ತು. ಆದರೆ, ಪುತ್ರ ಎಚ್.ವಿ.ವೆಂಕಟೇಶ್ ಅಭ್ಯರ್ಥಿಯಾಗಿದ್ದರೂ ಫಲಿತಾಂಶ ಜೆಡಿಎಸ್ ಪರವಾಗಿತ್ತು, 10 ವರ್ಷದ ಹಿಂದಿನ ಪ್ರಯೋಗಕ್ಕೆ ಕೈ ಪಾಳಯ ಮುಂದಾಗಿದೆ.

ಜೆಡಿಎಸ್ ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅವರನ್ನೇ ಕಣಕ್ಕಿಳಿಸಿದ್ದು ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ದಲಿತ ಎಡಗೈ ಹಾಗೂ ಒಕ್ಕಲಿಗ ಮತಗಳನ್ನು ನಂಬಿಕೊಂಡಿದ್ದಾರೆ. ಸಮರ್ಥ ನಾಯಕರೇ ಇಲ್ಲವಾಗಿರುವ ಬಿಜೆಪಿ ಕೃಷ್ಣನಾಯಕ್ ಅವರನ್ನು ಕಣಕ್ಕಿಳಿಸಿದ್ದು, ಗೆಲುವು ಪಡೆಯಲಾಗದಿದ್ದರೂ ಪ್ರಬಲ ಪೈಪೋಟಿ ನೀಡುವ ಸಂಕಲ್ಪದಿಂದ ಹೋರಾಟ ನಡೆಸಿದ್ದಾರೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬಿಜೆಪಿಗೆ ಬಲ ನೀಡಬೇಕಿದೆ.

ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಅಷ್ಟಾಗಿ ಇಲ್ಲ. ಕಾಂಗ್ರೆಸ್, ಜೆಡಿಎಸ್ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಯದೇ ಮೇಲುಗೈ. ನಂತರದ ಸ್ಥಾನದಲ್ಲಿರುವ ನಾಯಕರು ನಿರ್ಣಾಯಕರೆನಿಸಿದ್ದಾರೆ. ಗೊಲ್ಲರು, ಒಕ್ಕಲಿಗರು, ಕುರುಬರು, ಮುಸ್ಲಿಮರು, ಕಮ್ಮ ಒಕ್ಕಲಿಗ, ಲಿಂಗಾಯತ, ರೆಡ್ಡಿ ಸಮುದಾಯದವರಿದ್ದಾರೆ.

ಸೋಲಾರ್ ಪಾರ್ಕ್‌ನಂತಹ ಬಹುದೊಡ್ಡ ಯೋಜನೆಯನ್ನು ತಂದು ತಮ್ಮದೇ ಅಂತ ಬಿಂಬಿಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೂ ಪಾವಗಡ ಮೇಲೆ ವಿಶೇಷ ಆಸಕ್ತಿಯಿದೆ.

ಬಿಜೆಪಿಯಿಂದ ಲಂಬಾಣಿ ಸಮುದಾಯದ ಅಭ್ಯರ್ಥಿ ಕಣಕ್ಕಿಳಿದಿರುವುದು, ಕುರುಬ ಹಾಗೂ ಯಾದವ ಸಮುದಾಯದ ಪ್ರಮುಖ ಮುಖಂಡರೇ ಪಕ್ಷ ತೊರೆದಿರುವುದು ಕೈಗೆ ಕೊಂಚ ಹಿನ್ನಡೆ ತಂದಿದ್ದು ಸಕಲ ಸಂಪನ್ಮೂಲ ಬಳಸಿ ಅಬ್ಬರದ ಪ್ರಚಾರ ನಡೆಯುತ್ತಿದೆ.

ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲು ಕಂಡಿರುವ ಜೆಡಿಎಸ್ ಅಭ್ಯರ್ಥಿ ಈ ಚುನಾವಣೆಯಲ್ಲಿ ಗೆಲುವಿನ ವಿಶ್ವಾಸದಲ್ಲಿದ್ದರೂ ಎಲ್ಲ ಜಾತಿಗಳ ಮತಗಳನ್ನು ಉಳಿಸಿಕೊಳ್ಳುವುದು ಅವರಿಗೂ ಸವಾಲಾಗಿದೆ.

ಪಾವಗಡ ತಾಲೂಕಿನ ಮತದಾರರು
ಒಟ್ಟು ಮತದಾರರು 200397
ಪುರಷರು 102489
ಮಹಿಳೆಯರು 97901
ಇತರ 7

ಜಾತಿವಾರು ಲೆಕ್ಕಾ ಚಾರ
ಪರಿಶಿಷ್ಟ ಜಾತಿ 65 ಸಾವಿರ
ಪರಿಶಿಷ್ಟ ಪಂಗಡ 40 ಸಾವಿರ
ಗೊಲ್ಲರು 30 ಸಾವಿರ
ಕುರುಬರು 15 ಸಾವಿರ
ಒಕ್ಕಲಿಗರು 10ಸಾವಿರ
ಮುಸ್ಲಿಮರು 10ಸಾವಿರ
ಬಲಿಜ 8 ಸಾವಿರ
ಇತರ 22397

2018ರ ಫಲಿತಾಂಶ

ವೆಂಕಟರಮಣಪ್ಪ (ಕಾಂಗ್ರೆಸ್) 72974
ಕೆ.ಎಂ.ತಿಮ್ಮರಾಯಪ್ಪ (ಜೆಡಿಎಸ್) 72565

ಅಂತಿಮ ಕಣದಲ್ಲಿರುವ ಕಲಿಗಳು
ಎನ್.ರಾಮಾಂಜಿನಪ್ಪ(ಎಎಪಿ), ಎಚ್.ವಿ.ವೆಂಕಟೇಶ್(ಕಾಂಗ್ರೆಸ್), ಕೆ.ಎಂ.ತಿಮ್ಮರಾಯಪ್ಪ(ಜೆಡಿಎಸ್), ಕೃಷ್ಣನಾಯಕ(ಬಿಜೆಪಿ), ಟಿ.ಹನುಮಂತರಾಯ(ಬಿಎಸ್‌ಪಿ), ನಾಗೇಂದ್ರ ಕುಮಾರ್(ಕೆಆರ್‌ಪಿಪಿ), ಬಿ.ಟಿ.ರಾಮಸುಬ್ಬಯ್ಯ(ಭಾರತೀಯ ಬಹುಜನ ಕ್ರಾಂತಿ ದಳ), ಸಿ.ಎನ್.ನರಸಿಂಹರಾಜು(ಕೆಆರ್‌ಎಸ್), ಪಕ್ಷೇತರರಾದ ವಿ.ಗೋವಿಂದಪ್ಪ, ಎಸ್.ಎಚ್.ಶ್ರೀನಿವಾಸ್, ನಾಗರಾಜಪ್ಪ ಸೇರಿ 11 ಅಭ್ಯರ್ಥಿಗಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net