ಆಜಾನ್ ಮತ್ತು ನಮಾಜ್ ಮಾಡುವ ವೇಳೆ ದುರ್ಗಾ ಪೂಜೆ ಚಟುವಟಿಕೆ ನಿಲ್ಲಿಸಿ: ಬಾಂಗ್ಲಾ ಸರ್ಕಾರ ಸೂಚನೆ

ವಿಜಯವಾಣಿ - 2024-09-12T151813.571
Published on

ಢಾಕಾ: ಆಜಾನ್ ಶುರುವಾಗುವ ಐದು ನಿಮಿಷಗಳ ಮೊದಲು ಮತ್ತು ನಮಾಜ್ ಮಾಡುವ ಸಮಯದಲ್ಲಿ ದುರ್ಗಾ ಪೂಜೆಗೆ ಸಂಬಂಧಿಸಿದ ಯಾವುದೇ ಚುಟುವಟಿಕೆಗಳಾಗಲಿ, ಸಂಗೀತ, ವಾದ್ಯ ನುಡಿಸುವುದೇ ಆಗಲಿ ಮಾಡುವಂತಿಲ್ಲ. ಇದನ್ನೆಲ್ಲ ನಿಲ್ಲಿಸಬೇಕು ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಅಲ್ಲಿನ ಹಿಂದೂ ಸಮುದಾಯಕ್ಕೆ ಮನವಿ ಮಾಡಿದೆ.

ಇಂತಹ ಚಟುವಟಿಕೆಗೆಳು ನಿಲ್ಲಬೇಕಿದೆ. ನಮಾಜ್ ಮಾಡುವ ಸಮಯದಲ್ಲಿ ಹಾಗೂ ಪ್ರಾರಂಭವಾಗುವ ಐದು ನಿಮಿಷಗಳಿಗೂ ಮುನ್ನವೇ ದುರ್ಗಾ ಪೂಜೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಗಳು ನಡೆಯಬಾರದು. ಹಾಡುಗಳ ಹಾಡುವುದು, ಮ್ಯೂಸಿಕಲ್​ ವಾದ್ಯವನ್ನು ನುಡಿಸುವುದು ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು ಎಂದು ಬಾಂಗ್ಲಾ ಮಧ್ಯಂತರ ಸರ್ಕಾರದ ಗೃಹ ಸಚಿವಾಲಯದ ಸಲಹೆಗಾರರಾದ ಲೆ. ಜನರಲ್ (ನಿವೃತ್ತ) ಮೊಹಮ್ಮದ್ ಜಹಾಂಗೀರ್ ಆಲಂ ಚೌಧುರಿ ತಿಳಿಸಿದ್ದಾರೆ.

"ಆಜಾನ್, ನಮಾಜ್ ಸಮಯದಲ್ಲಿ ಪೂಜೆಗೆ ಸಂಬಂಧಿಸಿದ ವಾದ್ಯ, ಸಂಗೀತ ಉಪಕರಣಗಳು ಆಫ್​ ಆಗಿರಬೇಕು ಎಂದು ನಾವು ಪೂಜಾ ಸಮಿತಿಗಳಿಗೆ ಈಗಾಗಲೇ ತಿಳಿಸಿದ್ದೆವು. ಅದರಂತೆಯೇ ಸಮಿತಿಗಳು ಕೂಡ ಒಪ್ಪಿಗೆ ಸೂಚಿಸಿವೆ" ಎಂದು ಆಲಂ ಚೌಧುರಿ ಹೇಳಿದ್ದಾರೆ. ಈ ವರ್ಷ ದೇಶಾದ್ಯಂತ ಒಟ್ಟು 32,666 ಪೂಜಾ ಮಂಟಪಗಳುನ್ನು ನಿರ್ಮಿಸಲಾಗಿದೆ. ಕಳೆದ ವರ್ಷ 31,431 ಮಂಟಪಗಳನ್ನು ಹಾಕಲಾಗಿತ್ತು. ಆದ್ರೆ, ಈ ಬಾರಿ ಕಡಿಮೆಯಾಗಿದೆ.

"ದುರ್ಗಾ ಪೂಜೆಯ ನಿಮಿತ್ತ ಹಾಕಲಾಗಿರುವ ಮಂಟಪಗಳಲ್ಲಿ ದಿನದ 24 ಗಂಟೆ ಕೂಡ ಭದ್ರತೆ ನೀಡುವುದು ಹೇಗೆ ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ. ಕಿಡಿಗೇಡಿಗಳಿಂದ ಯಾವುದೇ ರೀತಿಯ ತೊಂದರೆ, ಅಡಚಣೆ ಉಂಟಾಗದಂತೆ ನೋಡಿಕೊಳ್ಳಲು ಸೂಕ್ತ ಹಾಗೂ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ" ಎಂದು ಚೌಧುರಿ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net