

ಕೋಲಾರ : ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಸಂಬಂಧ ಹೈ-ಕೋರ್ಟ್ ಆಡಳಿತಾತ್ಮಕವಾಗಿ ಗಮನಿಸಿರುವ ಲೋಪ ಸರಿಪಡಿಸಲು ಸಂಬಂಧಪಟ್ಟ ಇಲಾಖೆ ಹಾಗೂ ಸರ್ಕಾರ ಅಗತ್ಯ ಕ್ರಮ ಕೈಗೊಂಡು ಪಪಂ ರಚನೆ ಪ್ರಕ್ರಿಯೆ ಅಂತಿಮಗೊಳಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಪಂ ಘೋಷಣೆಯನ್ನು ಆರಂಭದಲ್ಲಿ ಸ್ವಾಗತಿಸಿದ ಕೆಲವರು ನಂತರ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಸಿದ್ದರು. ಮಧ್ಯ ಪ್ರವೇಶಿಸಿದ ಕೋರ್ಟ್ ಆಕ್ಷೇಪಣೆಗಳ ಕುರಿತು ಪೌರಾಡಳಿತ ನಿರ್ದೇಶನಾಲಯ ಸಾರ್ವಜನಿಕರನ್ನು ಕರೆಸಿ ಮಾತನಾಡಿಸಿಲ್ಲ ಎಂದು ಆಕ್ಷೇಪಿಸಿದೆ. ಸಂವಿಧಾನದ ತಿದ್ದುಪಡಿ 74ರಡಿ ಸೆಕ್ಷನ್ 9ರ ಪ್ರಕಾರ ಡಿಸಿಯವರ ಬದಲು ಪೌರಾಡಳಿತ ನಿರ್ದೇಶಕರ, ಸರ್ಕಾರದ ಹಂತದಲ್ಲಿ ಆಕ್ಷೇಪ ಪರಿಶೀಲಿಸಬೇಕು ಎಂಬುದಾಗಿದೆ. ಪಪಂ ರಚನೆಯ ಪ್ರಾಥಮಿಕ ಆದೇಶನ್ನು ರದ್ದು ಮಾಡಿಲ್ಲ. ಸರ್ಕಾರ ಕೂಡಲೇ ಹೈಕೋರ್ಟ್ ಆಕ್ಷೇಪಗಳ ಕುರಿತು ಗಮನಹರಿಸಿ ಪಟ್ಟಣ ಪಂಚಾಯಿತಿ ರಚನೆಗೆ ಇರುವ ಅಡ್ಡಿ ನಿವಾರಿಸಬೇಕು ಎಂದರು.
ಪಪಂ ಪ್ರಾಥಮಿಕ ಘೋಷಣೆ ಆಧರಿಸಿ ರಾಜ್ಯ ಚುನಾವಣಾ ಆಯೋಗ ಜಿಪಂ, ತಾಪಂ ಚುನಾವಣೆ ಪಪಂ ವ್ಯಾಪ್ತಿಯನ್ನು ಹೊರಗಿಟ್ಟಿದೆ. ಪೌರಾಡಳಿತ ಕಾಯ್ದೆ 9ರನ್ವಯ ಆಡಳಿತಾತ್ಮಕ ತಪ್ಪುಗಳ ಬಗ್ಗೆ ಕೋರ್ಟ್ ಎತ್ತಿದ ವಿಷಯಗಳನ್ನು ಬಗೆಹರಿಸಲು ಸಂಬಂಧಿಸಿದ ಇಲಾಖೆಗಳು ಮತ್ತು ಸರ್ಕಾರ ತಡ ಮಾಡದೆ ಕ್ರಮ ಕೈಗೊಂಡು ಪಪಂ ಆಗಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಪಪಂ ಘೋಷಣೆ ನಂತರ ಸರ್ಕಾರ ಮುಖ್ಯಾಧಿಕಾರಿಗಳು, ಇಂಜಿನಿಯರ್‌ಗಳನ್ನು ನಿಯೋಜಿಸಿತ್ತು. ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೀಗ 20 ಹಳ್ಳಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೆ, ಜನರ ಬದುಕಿಗೆ ಅನನುಕೂಲವಾಗಿದೆ. ಕುಡಿಯುವ ನೀರು, ಸಮಸ್ಯೆ, ಸ್ವಚ್ಛತೆ, ಬೀದಿದೀಪದ ವ್ಯವಸ್ಥೆ, ಜನನ, ಮರಣ ಪ್ರಮಾಣ ಪತ್ರ, ಮನೆ ನಿರ್ಮಾಣಕ್ಕೆ ಪರವಾನಗಿ ಪಡೆಯಲು ತೊಂದರೆಯಾಗಿದೆ. ನೌಕರರಿಗೆ 5 ತಿಂಗಳಿಂದ ಸಂಬಳ ಆಗಿಲ್ಲ. ಮಗು ಹುಟ್ಟಿದೆ, ನಾಮಕರಣ ಮಾಡಿದ ಮೇಲೆ ಕತ್ತುಹಿಸುಕಿ ಸಾಯಿಸುವ ಪ್ರಯತ್ನವಾದರೆ ಅದು ಅಮಾನವೀಯ, ಅನಾಗರಿಕ ಎಂದರು.
ಪೂರ್ವ ಸಿದ್ಧತೆ: ಕೋಲಾರ ತಾಲೂಕಿನ ದೊಡ್ಡ ಕಂದಾಯ ಹೋಬಳಿ ವೇಮಗಲ್ ವ್ಯಾಪ್ತಿಯ 20 ಹಳ್ಳಿಗಳನ್ನು ಒಟ್ಟುಗೂಡಿಸಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿಯನ್ನಾಗಿಸುವ ಸಂಬಂಧ 2020ರ ಡಿ.2ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು.ಇದಕ್ಕೂ ಮುನ್ನ ಸರ್ಕಾರ ಗ್ರಾಪಂ, ತಾಪಂ, ಜಿಪಂ, ಜಿಲ್ಲಾಡಳಿತ, ಆರ್‌ಡಿಪಿಆರ್, ಪೌರಾಡಳಿತ ನಿರ್ದೇಶನಾಲಯ, ಹಣಕಾಸು ಇಲಾಖೆಯಿಂದ ಅಭಿಪ್ರಾಯ, ವರದಿ ಪಡೆದಿದೆ, ಸಚಿವ ಸಂಪುಟದ ಅನುಮೋದನೆ ನಂತರ ರಾಜ್ಯಪಾಲರಿಂದ ಅಂಗೀಕೃತಗೊಂಡು ಅಂತಿಮ ನೋಟಿಫಿಕೇಷನ್ ಹೊರಡಿಸಿದೆ.
ಇದನ್ನು ವೇಮಗಲ್, ಶೆಟ್ಟಿಹಳ್ಳಿ, ಕುರುಗಲ್ ಗ್ರಾಪಂ ಅಧ್ಯಕ್ಷರು, ಸದಸ್ಯರು, ಚೌಡದೇನಹಳ್ಳಿ ಗ್ರಾಪಂನ ನಾಲ್ಕು ಹಳ್ಳಿಗಳ ಸದಸ್ಯರು, ಸಂಸದ ಮುನಿಸ್ವಾಮಿ, ಶಾಸಕರಾದ ಶ್ರೀನಿವಾಸಗೌಡ, ಇಂಚರ ಗೋವಿಂದರಾಜು, ಅಂದಿನ ಉಸ್ತುವಾರಿ ಸಚಿವ ನಾಗೇಶ್ ಸ್ವಾಗತಿಸಿ ಸಿಎಂ, ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದರು ಎಂದರು.
ಪಪಂಗೆ ಆಡಳಿತ ಕಚೇರಿಗೆ ಕುರುಗಲ್ ಗ್ರಾಪಂ ಸರ್ವೆ ನಂ. 51ರಲ್ಲಿ 23 ಎಕರೆ ಜಾಗ ಇದೆ, 10 ಎಕರೆ ಜಾಗಕ್ಕೆ ಮುಳ್ಳು ತಂತಿ ಹಾಕಿ ಕಾಯ್ದಿರಿಸುವ ಬಗ್ಗೆಯೂ ನಿರ್ಣಯ ತೆಗೆದುಕೊಂಡಿದೆ, ಸರ್ಕಾರಕ್ಕೆ ಡಿಸಿ ಸಲ್ಲಿಸಿದ ವರದಿಯಲ್ಲೂ ಹೇಳಿದ್ದಾರೆ. ರಾಜ್ಯ ಹೆದ್ದಾರಿ ಹಾದುಹೋಗಿದೆ,ಭವಿಷ್ಯದಲ್ಲಿ ಹೊಸ ತಾಲೂಕು ಆಗುವ ಅವಕಾಶ ಇದೆ, ಹಿಂದೆ ವೇಮಗಲ್ ಪ್ರತ್ಯೇಕ ವಿಧಾನಸಭಾ ಕ್ಷೇತ್ರವಾಗಿತ್ತು, ಮುಂದೆ ಕ್ಷೇತ್ರ ಪುನರ್ವಿಗಂಡಣೆ ವೇಳೆ ಮತ್ತೆ ಕ್ಷೇತ್ರವಾಗುವ ಅವಕಾಶವೂ ಇದೆ ಎಂದು ಅಭಿಪ್ರಾಯಿಸಿದರು.
ಪಪಂ ಆಗಿ ಮೇಲ್ದರ್ಜೆಗೇರಿದರೆ ನರೇಗಾ ಕೈತಪ್ಪಬಹುದೆಂಬ ಆತಂಕ ಇರಬಹುದು, ನರೇಗಾ ಹೋದರೂ ಆಯಾ ಇಲಾಖೆಗಳ ಮೂಲಕ ಕೃಷಿ, ರೇಷ್ಮೆ, ತೋಟಗಾರಿಕೆ ಇಲಾಖೆ ಕಾರ್ಯಕ್ರಮ ಬಳಸಿಕೊಳ್ಳಬಹುದು, ನಗರ ಪ್ರದೇಶಕ್ಕೂ ನರೇಗಾ ಮಾದರಿಯಲ್ಲೇ ಹೊಸ ಕಾರ್ಯಕ್ರಮ ರೂಪಿಸಲು ಕೇಂದ್ರ ಚಿಂತಿಸಿದೆ, ಕೇಂದ್ರ, ರಾಜ್ಯ ಸರ್ಕಾರದಿಂದ ಹತ್ತಾರು ಕಾರ್ಯಕ್ರಮಗಳು, ಅನುದಾನ ಲಭ್ಯವಾಗಲಿದೆ. ವಿ.ಆರ್. ಸುದರ್ಶನ್, ವಿಧಾನ ಪರಿಷತ್ ಮಾಜಿ ಸಭಾಪತಿ