

| ಮಲ್ಲಿಕಾರ್ಜುನ ಗುಮ್ಮಗೋಳ
ಕನ್ನಡ ಚರಿತ್ರೆಯ ಪುಟದಲ್ಲಿ ಭಾಲ್ಕಿಯ ಚನ್ನಬಸವ ಪಟ್ಟದ್ದೇವರು ಹೆಸರು ಅಜರಾಮರ. ಅದು ಹೈದರಾಬಾದ್ ನಿಜಾಮರ, ಕ್ರೂರ ರಜಾಕಾರರ ಆಳ್ವಿಕೆಯಿಂದ ತತ್ತರಿಸಿ ಹೋದ ನೆಲ. ನೆಲಮೂಲ ಸಂಸ್ಕೃತಿ ಮುದುಡಿಕೊಂಡು, ನಿತ್ಯ ವ್ಯವಹಾರದಲ್ಲೆಲ್ಲ ಉರ್ದು ಮೈದೋರಿ ಮೆರೆದಾಡುತ್ತಿತ್ತು. ಆದರೂ ಅಲ್ಲಲ್ಲಿ ‘ಉದಕದೊಳಗೆ ಬೈಚಿಟ್ಟ ಬಯಕೆಯ ಕಿಚ್ಚಿನಂತೆ’ ಅಸ್ಮಿತೆ ಪರಿಮಳಿಸುತ್ತಿತ್ತು. ಹಲವಾರು ಸಂತರು, ಶರಣರು, ದಾಸರು ಅದನ್ನು ತಮ್ಮದೇ ನೆಲೆಯಲ್ಲಿ ಸ್ಥಾಯಿಗೊಳಿಸುತ್ತಿದ್ದರು. ಇಂತಹ ಸಂಕಷ್ಟದ ಕಾಲದಲ್ಲಿ ಭಾಲ್ಕಿಯ ಪಟ್ಟದ್ದೇವರು ಹೊರಗೆ ಉರ್ದು ಶಾಲೆಯ ನಾಮಫಲಕ ಹಾಕಿಕೊಂಡು ಒಳಗೆ ಕನ್ನಡ ಅಕ್ಷರದ ದೀಕ್ಷೆ ಕೊಡುತ್ತಿದ್ದರು. ರಾತ್ರಿಯಾಗುತ್ತಲೇ ಬಗಲಿಗೆ ಜೋಳಿಗೆ ಹಾಕಿ ಕುದುರೆಯನೇರಿ ಭಿಕ್ಷಾಟನೆಗೆ ತೆರಳುತ್ತಿದ್ದರು. ಊರ ಮುಂದಿನ ಮರಕ್ಕೆ ಜೋಳಿಗೆ ನೇತುಹಾಕುತ್ತಿದ್ದರು. ಭಕ್ತರು ಹಾಕಿದ ಹಿಡಿಕಾಳನ್ನು ತಂದು, ಬೀಸಿ, ರೊಟ್ಟಿ ಬಡಿದು ಮಕ್ಕಳಿಗೆ ತಿನ್ನಿಸಿ, ಅನ್ನ, ಅಕ್ಷರದ ದಾಸೋಹ ನಡೆಸುತ್ತಿದ್ದರು.
ಭಾಲ್ಕಿಯ ಚನ್ನಬಸವಪಟ್ಟದ್ದೇವರು 1890 ಡಿಸೆಂಬರ್ 22ರಂದು ಜನಿಸಿದರು. ಹಾನಗಲ್ ಕುಮಾರಸ್ವಾಮಿಗಳ ಶಿವಯೋಗಮಂದಿರದಲ್ಲಿ ಧಾರ್ವಿುಕ ಶಿಕ್ಷಣ ಮುಗಿಸಿದ ಅವರು 1924ರಲ್ಲಿ ಭಾಲ್ಕಿ ಮಠದ ಪೀಠಾಧಿಪತಿಯಾದರು. ತಮ್ಮ ಗುರುಗಳ ಇಚ್ಛೆಯಂತೆ ಪಟ್ಟದ್ದೇವರು ಕನ್ನಡವನ್ನು ಪುನಃರುಜ್ಜಿವನಗೊಳಿಸುವ ಕಾಯಕದಲ್ಲಿ ತೊಡಗಿದರು. ಬಸವಣ್ಣ ಹಾಕಿಕೊಟ್ಟ ಅನುಭವಮಂಟಪ ಎಂಬ ಸಂಸತ್ತನ್ನು ಮುಂದುವರಿಸಿಕೊಂಡು ಬಂದ ಶ್ರೀಗಳು ಅಲ್ಲಿ ಕನ್ನಡದ ನುಡಿ ಬೆಳವಣಿಗೆಗೆ ಶ್ರೀಕಾರ ಹಾಕಿದರು. 1936ರಲ್ಲಿ ಆಂಧ್ರಪ್ರದೇಶದ ಮೋರಗಿಯಲ್ಲಿ ಶಾಂತಿವರ್ಧಕ ಗುರುಕುಲಾಶ್ರಮವನ್ನು, ಪ್ರಸಾದ ನಿಲಯವನ್ನು ಪ್ರಾರಂಭಿಸಿದರು. ಆಡಳಿತಾತ್ಮಕ ತೊಂದರೆಯಿಂದಾಗಿ ಶಾಲೆಯನ್ನು ಮಾಂಜರಾ ನದಿ ದಂಡೆಯ ಸಂಗಮ ಗ್ರಾಮಕ್ಕೆ ಸ್ಥಳಾಂತರಿಸಿದರು. ಶಾಲೆ ಪ್ರವಾಹದ ಬಾಧೆಗೆ ತುತ್ತಾಗತೊಡಗಿತು. ಅಲ್ಲಿಂದ ಕಮಲನಗರಕ್ಕೆ ಸ್ಥಳಾಂತರಿಸಿದರು. ‘ಉಚಿತ ಪ್ರಸಾದ ನಿಲಯದ ವಿದ್ಯಾರ್ಥಿಗಳೇ ನಮ್ಮ ಗುರು ಲಿಂಗ ಜಂಗಮ. ಅವರಿಗೆ ತನು ಮನ ಧನದಿಂದ ಸೇವೆ ಸಲ್ಲಿಸುವುದೇ ನಮ್ಮ ಕರ್ತವ್ಯ’ ಎಂದು ಅವರು ಭಾವಿಸಿದ್ದರು. ಹದಿನೈದು ದಲಿತ ವಿದ್ಯಾರ್ಥಿಗಳಿಗೆ ಲಿಂಗದೀಕ್ಷೆ ಕೊಟ್ಟು, ಭಾಲ್ಕಿ ಮಠದ ಪ್ರಸಾದ ನಿಲಯಕ್ಕೆ ಸೇರಿಸಿಕೊಂಡರು.
109 ವರ್ಷಗಳ ಸಾರ್ಥಕ ಬದುಕನ್ನು ನಡೆಸಿದ ಪಟ್ಟದ್ದೇವರು 1999 ಏಪ್ರಿಲ್ 22ರಂದು ಲಿಂಗೈಕ್ಯರಾದರು. ಶ್ರೀಗಳ 132ನೇ ಜಯಂತಿಯನ್ನು ಇದೇ 22ರಂದು ರಾಜ್ಯದಾದ್ಯಂತ ಆಚರಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಮಹೇಶ್ ಜೋಶಿ ಹೇಳಿದ್ದು, ಆ ಮೂಲಕ ಕನ್ನಡವನ್ನು ಪೊರೆದ ಮಹಾತ್ಮನನ್ನು ಈ ನಾಡಿಗೆ ಜ್ಞಾಪಿಸುವ ಕೆಲಸವನ್ನು ಮಾಡಿದ್ದಾರೆ. ಶಿಕ್ಷಣ, ದಾಸೋಹ ಮತ್ತು ಕನ್ನಡ ಬೆಳವಣಿಗೆಯಲ್ಲಿ ಮಠಮಾನ್ಯಗಳ ಕೊಡುಗೆ ಅಪಾರ. ಕನ್ನಡ ನಾಡು ನುಡಿ ಸಂರಕ್ಷಣೆಗಾಗಿ ಮಠವನ್ನು ಗರಡಿಯಾಗಿಸಿಕೊಂಡಿದ್ದ ದೇವರು, ಸ್ವಾತಂತ್ರ್ಯ ಚಳವಳಿ ಮತ್ತು ಕರ್ನಾಟಕ ಏಕೀಕರಣಕ್ಕಾಗಿ ಅಹರ್ನಿಶಿ ದುಡಿದರು. ಭಾಲ್ಕಿ ಪಟ್ಟದ್ದೇವರು ಬೆಳೆಸಿದ, ಉಳಿಸಿದ ಬಸವಪಥ ಅವರ ನಿರ್ಮಲ ಮಮತೆಗೆ ಸಾಕ್ಷಿಯಾಗಿ ನಿಂತಿದೆ. ಅವರು ಕಟ್ಟಿದ ಶಾಲೆ, ಪ್ರಸಾದ ನಿಲಯ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಸಾವಿರಾರು ಬಡಮಕ್ಕಳಿಗೆ ಬೆಳಕಾಗಿದೆ. ಜನರ ಮನದಲ್ಲಿ, ಕನ್ನಡದ ದನಿಯಲ್ಲಿ ಅವರ ಪ್ರೇಮ ಮತ್ತು ದುಡಿಮೆ ಅನುರಣಿಸುತ್ತಿದೆ.
(ಲೇಖಕರು ಹವ್ಯಾಸಿ ಬರಹಗಾರರು)