ಸಂಕ್ರಮಣದಂದು ಕಾಲುವೆಗೆ ನೀರು ಹರಿಸಲು ಸಂಕಲ್ಪ

dhp-19-2
ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ ಕ್ರಾಸ್ ಬಳಿ ಹಮ್ಮಿಕೊಂಡಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಸೋಮನಗೌಡ ಪಾಟೀಲ ಸಾಸನೂರು ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಿಬಿನಾಳ, ಎಂ. ಆರ್. ಪಾಟೀಲ, ಕೊನಪ್ಪಗೌಡ ಪಾಟೀಲ, ಎಂ.ಎಸ್. ಮಠ, ಮಹಾಂತೇಶಗೌಡ ಪಾಟೀಲ ಇತರರಿದ್ದರು.
Published on


ದೇವರಹಿಪ್ಪರಗಿ: ರೈತರ ಬಹು ನಿರೀಕ್ಷಿತ ಬೂದಿಹಾಳ-ಪೀರಾಪೂರ ಏತ ನೀರಾವರಿ ಯೋಜನೆ ಕಾಮಗಾರಿ ಭರದಿಂದ ಸಾಗಿದ್ದು, ಮುಂಬರುವ ಸಂಕ್ರಮಣದಂದು ಕಾಲುವೆಗಳಿಗೆ ನೀರು ಹರಿಸುವ ಸಂಕಲ್ಪ ಮಾಡಿದ್ದೇವೆ ಎಂದು ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.ತಾಲೂಕಿನ ಮಾರ್ಕಬ್ಬಿನಹಳ್ಳಿ ಕ್ರಾಸ್ ಬಳಿ ಲೋಕೋಪಯೋಗಿ ಇಲಾಖೆ, ಎಸ್‌ಎಚ್‌ಡಿಪಿ ಸಹಭಾಗಿತ್ವದಲ್ಲಿ ಲೋಕೋಪಯೋಗಿ ಇಲಾಖೆ ಉಪ ವಿಭಾಗ, ಸಿಂದಗಿ 2021-22ನೇ ಸಾಲಿನ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ-4ರ ಘಟ್ಟ-2 ರಡಿ ಪ್ಯಾಕೇಜ್-480(ಎ) ತಾಲೂಕಿನ ಶಿರಾಡೋಣ-ಲಿಂಗಸೂರ ರಾಜ್ಯ ಹೆದ್ದಾರಿ-41ರ ಕಿಮೀ 93.60-100.23ರ ವರೆಗೆ ರಸ್ತೆ ಅಭಿವೃದ್ಧಿಪಡಿಸುವ ಅಂದಾಜು 11 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ನೀರಾವರಿ ಯೋಜನೆ ಜಾರಿಗೆ ತರದೆ ಸುಳ್ಳು ಹೇಳಿ ಜನರಿಗೆ ವಂಚಿಸಿತ್ತು. ಆದರೆ, ಬಿಜೆಪಿ ಸರ್ಕಾರ ವೈಜ್ಞಾನಿಕವಾಗಿ ನೀರಾವರಿ ಯೋಜನೆಗೆ ಅಂದಾಜು 800 ಕೋಟಿ ರೂ. ವೆಚ್ಚದ ಹಣ ಮಂಜೂರು ಮಾಡಿ ಜಾರಿಗೆ ತಂದಿದೆ ಎಂದರು.

ಈ ಭಾಗದ ಯಾಳವಾರ ಸೇರಿ ಹಲವಾರು ಗ್ರಾಮಗಳ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಕೆಲ ರಸ್ತೆ, ಬ್ರೀಡ್ಜ್ ಕಂ ಬ್ಯಾರೇಜ್, ಸಿಸಿ ರಸ್ತೆಗಳು ಪ್ರಗತಿಯಲ್ಲಿವೆ. ವಿಜಯಪುರ ಮೇನ್ ಕಾಲುವೆಯಿಂದ ಚಿಮ್ಮಲಗಿ ಮುಖ್ಯಕಾಲುವೆಗೆ ಡಿಸ್ಟ್ರಿಬ್ಯೂಟರ್ ಕಾಮಗಾರಿಯಡಿ ಅಂದಾಜು 680 ಕೋಟಿ ರೂ. ವೆಚ್ಚದಲ್ಲಿ 1.25 ಲಕ್ಷ ಎಕರೆ ಪ್ರದೇಶದಲ್ಲಿ ರೈತರ ಜಮೀನುಗಳಿಗೆ ನೀರಾವರಿ ಕಲ್ಪಿಸಲು ಯೋಜನೆ ಟೆಂಡರ್ ಹಂತದಲ್ಲಿದೆ ಎಂದರು.

ಸಾತಿಹಾಳ ರಸ್ತೆಯನ್ನು ಅಂದಾಜು 11 ಕೋಟಿ ರೂ. ವೆಚ್ಚದಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಗುಣಮಟ್ಟದ ರಸ್ತೆ ನಿರ್ಮಿಸಲು ಇಂಜಿನಿಯರ್‌ಗೆ ತಿಳಿಸಲಾಗಿದೆ. ಇನ್ನು 15 ದಿನದೊಳಗಾಗಿ ದೇವರಹಿಪ್ಪರಗಿಯಿಂದ ಇಂಡಿಗೆ ಸಂಪರ್ಕ ಕಲ್ಪಿಸುವ ರಸ್ತೆಗೂ ಭೂಮಿಪೂಜೆ ನೆರವೇರಲಿದೆ ಎಂದು ತಿಳಿಸಿದರು.

ಜಿಲ್ಲಾ ಬಿಜೆಪಿ ಕಾರ್ಯದರ್ಶಿ ರಮೇಶ ಮಸಿಬಿನಾಳ ಮಾತನಾಡಿದರು. ಎಂ. ಆರ್. ಪಾಟೀಲ, ಕೊನಪ್ಪಗೌಡ ಪಾಟೀಲ, ಎಂ.ಎಸ್. ಮಠ, ಮಹಾಂತೇಶಗೌಡ ಪಾಟೀಲ, ಶರಣಗೌಡ ಬಿರಾದಾರ, ಅಶೋಕಗೌಡ ಪಾಟೀಲ, ಗುತ್ತಿಗೆದಾರರಾದ ಎಸ್. ಎಚ್. ಪಾಟೀಲ, ಪಿಡಬ್ಲ್ಯುಡಿ ಇಂಜಿನಿಯರ್ ತಾರಾನಾಥ ರಾಠೋಡ, ಚಿದಾನಂದ ಹಚ್ಚಾಳ, ಮಹಾಂತೇಶ ವಂದಾಲ, ಹುಸೇನ್ ಗೌಡಿ, ಭೀಮನಗೌಡ ಲಚ್ಚಾಣ್, ಶ್ರೀಶೈಲ್ ರೂಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net