

ಶಿವಮೊಗ್ಗ: ಪರಂಪರೆಯಿಂದ ಬಂದ ಜಾನಪದ ಕಲೆಗಳ ಬಗ್ಗೆ ಆಸಕ್ತಿ ಬೆಳೆಸಲು ಕಲಿಕಾ ಶಿಬಿರಗಳು ಅತ್ಯುತ್ತಮ ಮಾರ್ಗ ಎಂದು ಡಿಡಿಪಿಯು ಚಂದ್ರಪ್ಪ ಗುಂಡಪಲ್ಲಿ ಅಭಿಪ್ರಾಯಪಟ್ಟರು.
ಜಾನಪದ ಪರಿಷತ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸೋಮವಾರ ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ಪದವಿಪೂರ್ವ ಕಾಲೇಜುಗಳ ಆಯ್ದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಮೂರು ದಿನಗಳ ಜಾನಪದ ಕಲೆಗಳ ಕಲಿಕಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಾನಪದ ಕಲೆಗಳು ಜೀವಂತವಾಗಿರಬೇಕು. ಜಾನಪದ ಹಾಡುಗಳನ್ನು ಕೇಳಿದಾಗ ಮನಸ್ಸಿಗಾಗುವ ಆನಂದವನ್ನು ವರ್ಣಿಸಲಾಸಾಧ್ಯ. ಜಾನಪದ ಕಲೆಗಳ ಕಲಿಕಾ ಶಿಬಿರ ಅಪರೂಪ. ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ತಾಳ್ಮೆ, ಆಸಕ್ತಿಯಿಂದ ಕಲಿಯಬೇಕು ಎಂದು ತಿಳಿಸಿದರು.
ಪದವಿಪೂರ್ವ ಕಾಲೇಜಿನ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಯೋಗೀಶ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಶಿಕ್ಷೆಯಾಗದಂತೆ ರೂಪಿಸಲು ಜಾನಪದ ಕಲೆಗಳ ಕಲಿಕಾ ಶಿಬಿರ ಅರ್ಥಪೂರ್ಣವಾಗಿದೆ. ಯಾವ ಕಲೆ ಉಪೇಕ್ಷೆಗೆ ಒಳಗಾಗಿದೆಯೋ ಅದನ್ನೇ ಯುವ ಮನಸ್ಸುಗಳಲ್ಲಿ ಬಿತ್ತುವ ಕೆಲಸವಾಗುತ್ತಿದೆ ಎಂದರು.
ಎನ್‌ಎಸ್‌ಎಸ್ ಜಿಲ್ಲಾ ಸಂಯೋಜಕ ಡಾ. ಉಮೇಶ್ ಭದ್ರಾಪುರ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ, ಕಲಾವಿದರಾದ ಹೊನ್ನಾವರದ ಗಣಪು ಬಡವಗೌಡ, ಚನ್ನರಾಯಪಟ್ಟಣದ ಎಂ.ಜಿ.ಮಂಜೇಗೌಡ, ನಳಿನಾಕ್ಷಿ, ಸುಶೀಲಾ ಷಣ್ಮುಗಂ, ಕೃಷ್ಣಮೂರ್ತಿ ಹಿಳ್ಳೋಡಿ, ಕೆ.ಎಸ್.ಮಂಜಪ್ಪ, ಮಹಾದೇವಿ, ನಾರಾಯಣ, ರಾಮಪ್ಪ ಗೌಡ ಉಪಸ್ಥಿತರಿದ್ದರು.