ಸಂಯಮವು ಕೂಡ ಮನುಜನ ಬಲು ದೊಡ್ಡ ಶಕ್ತಿ

ವಿಜಯವಾಣಿ (1)
Published on
ಆವ ಜೀವದ ಪಾಕವಾವನುಭವದಿನಹುದೊ!|

ಆವ ಪಾಪಕ್ಷಯವದಾವ ಪುಣ್ಯದಿನೋ!||

ಕಾವಿರದೆ ಪಕ್ವವಹ ಜೀವವಿಳೆಯೊಳಗಿರದು|

ನೋವೆಲ್ಲ ಪಾವಕವೊ-ಮಂಕುತಿಮ್ಮ||609||

ಯಾವ ಜೀವದ ಪಾಕವು ಯಾವ ಅನುಭವದಿಂದ ಆಗುತ್ತದೆಯೋ, ಯಾವ ಪಾಪವು ಯಾವ ಪುಣ್ಯದಿಂದ ಕ್ಷಯವಾಗುತ್ತದೋ ಹೇಳುವುದಕ್ಕಿಲ್ಲ. ಬಿಸಿಯಾಗದೆ ಪಕ್ವವಾಗುವ ಜೀವವು ಈ ಇಳೆಯಲ್ಲಿ ಇಲ್ಲ. ಹಾಗಾಗಿ ನೋವುಗಳೆಲ್ಲವೂ ಅಗ್ನಿಯಂತೆ ಪರಿಷ್ಕರಿಸುತ್ತದೆ ಎನ್ನುತ್ತದೆ ಈ ಕಗ್ಗ. ಬದುಕಿನಲ್ಲಿ ಬಾಲ್ಯ, ಯೌವ್ವನ, ನಡು ಹರೆಯ ಮತ್ತು ವೃದ್ಧಾವಸ್ಥೆಗಳು ಎಲ್ಲರಿಗೂ ಸರಿಸಮಾನ. ಪ್ರತಿದಿನವೂ ನವನವೀನ ಅನುಭವಗಳನ್ನು ಪಡೆಯುತ್ತಾ, ಅರಿವನ್ನು ವಿಸ್ತರಿಸಿಕೊಳ್ಳುತ್ತಾ ಮುನ್ನಡೆಯುವುದು ಬಾಳಿನ ರೀತಿ. ಈ ಚಲನೆಯಲ್ಲಿ ವ್ಯಕ್ತಿಯು ಎದುರಿಸುವ ಸವಾಲುಗಳು, ಮತಿ-ಮನಸ್ಸುಗಳಲ್ಲಾಗುವ ಮಥನ, ಭಾವ ತಲ್ಲಣಗಳು ವ್ಯಕ್ತಿಯನ್ನು ಒಮ್ಮೆ ಕಂಗೆಡಿಸಿದರೂ ವಾಸ್ತವವನ್ನು ಅರಿತುಕೊಳ್ಳಲು ಸಹಾಯ ಮಾಡುತ್ತವೆ. ಮನುಷ್ಯನು ಸೋತಾಗಲೆ ತಾನೆ ಆತ್ಮಾವಲೋಕನವನ್ನು ಮಾಡಿಕೊಳ್ಳುವುದು? ಅಪಮಾನಿತನಾದಾಗಲೆ ಸೆಟೆದು ನಿಲ್ಲುವ ಛಲ ಹುಟ್ಟುವುದು.

ಬಾಳಿನಲ್ಲಿ ಎಲ್ಲವೂ ಸುಲಭ ಲಭ್ಯವಾದಾಗ, ನಾವೇ ಭಾಗ್ಯವಂತರೆಂಬ ಭಾವವು ಬಲಿತಾಗ ನಡೆ-ನುಡಿಗಳು ಅಂಕೆ ಮೀರಿರುತ್ತವೆ. ತನಗೆ ಪ್ರಾಮುಖ್ಯತೆಯು ಸಿಗಬೇಕೆಂಬ ಆಗ್ರಹ, ನಡೆನುಡಿಯಲ್ಲಿ ಅಹಂ ಕಾಣಿಸಿಕೊಳ್ಳುತ್ತದೆ. ಗರ್ವಕ್ಕೆ ಬಂಧು-ಮಿತ್ರರಿರುವುದಿಲ್ಲ. ತನ್ನದೇ ಪ್ರತಿಷ್ಠೆಯ ಭ್ರಮೆಯೊಳಗೆ ಬದುಕು ಸುಳಿಯಂತೆ ಸುತ್ತುತ್ತಿರುತ್ತದೆ. ನೆಲ ನೋಡಿ ನಡೆಯದಿದ್ದಾಗ ಎಡವಿ ಬೀಳುವುದು ಸಹಜ. ಎದ್ದು ನಿಲ್ಲುವ ಪ್ರಯತ್ನದಲ್ಲಿ ತಾನು ನಡೆದ ರೀತಿಯೆ ತಪ್ಪಿದೆ ಎನ್ನುವುದು ಅರ್ಥವಾಗುತ್ತದೆ. ಪ್ರತಿಯೊಂದು ಸಂದರ್ಭವನ್ನು ಒಂದು ಅನುಭವವವೆಂದು ಸ್ವೀಕರಿಸುವುದು ಅಭ್ಯಾಸವಾದರೆ ವ್ಯಕ್ತಿತ್ವವು ಪರಿಪಕ್ವಗೊಳ್ಳುತ್ತದೆ. ದೌರ್ಬಲ್ಯಗಳನ್ನು ತೊಡೆದುಕೊಂಡು ಆತ್ಮಸಂಸ್ಕಾರವನ್ನು ಪಡೆಯಲು ಜೀವನವು ವೇದಿಕೆಯಾಗುತ್ತದೆ.

ಪ್ರತಿಯೊಂದು ಜೀವಾತ್ಮವು ಋಣದ ಎಳೆಗಳನ್ನು, ಕರ್ಮಶೇಷವನ್ನೂ ಹೊತ್ತು ಬಂದಿರುತ್ತದೆ. ಜನುಮ ಜನುಮಾಂತರಗಳಲ್ಲಿ ಮಾಡಿದ ಕರ್ಮದೋಷಗಳ, ಪಾಪ ಕಾರ್ಯಗಳ ಲೆಕ್ಕಾಚಾರದಲ್ಲಿ ವಿಧಿಯು ಬದುಕನ್ನು ಚಿತ್ರಿಸುತ್ತಾನೆ. ಪಡೆದು ಬಂದುದನ್ನು ಅನುಭವಿಸಲೇಬೇಕಾದುದರಿಂದ, ಒಳಿತಿಗಾಗಿ ಮಾಡುವ ಯತ್ನವು ವ್ಯರ್ಥ ಎನ್ನುವ ನಿರಾಸೆ ಬೇಡ. ಸತ್ ಚಿಂತನೆ, ಸತ್ಕಾರ್ಯಗಳನ್ನು ಮಾಡಿದರೆ ಹೊತ್ತು ತಂದ ಪಾಪದ ಹೊರೆಯು ಕರಗಬಹುದು, ಪುಣ್ಯ ಸಂಚಯನದಿಂದ ಆತ್ಮೋತ್ಕರ್ಷವು ಸಾಧ್ಯವಾಗಬಹುದು. ಇದನ್ನು ಅರ್ಥ ಮಾಡಿಕೊಳ್ಳದೆ ಮತ್ತೆಮತ್ತೆ ಪಾಪಕೃತ್ಯಗಳನ್ನೆಸಗುತ್ತಿದ್ದರೆ ಆತ್ಮೋದ್ದಾರವು ಸುಲಭವಾಗದು.

ಜೀವನವೆಂದರೆ ಆತ್ಮದ ಯಾತ್ರೆ. ಬದುಕಿನ ಹೋರಾಟವು ಆತ್ಮಸಂಸ್ಕಾರವನ್ನು ನೀಡಿ ಔನ್ನತ್ಯದತ್ತ ಕೊಂಡೊಯ್ಯುತ್ತದೆ. ಜೀವನದಲ್ಲಿ ಇನ್ನಿಲ್ಲದಷ್ಟು ಕಷ್ಟ-ನಷ್ಟಗಳನ್ನುಅನುಭವಿಸಿದವರು, ಎಲ್ಲವನ್ನೂ ಸಹನೆಯಿಂದ ಎದುರಿಸಿದವರು ವಿಶಾಲವಾಗಿ ಯೋಚಿಸುತ್ತಾರೆ. ಜೀವನದ ಮೌಲ್ಯವನ್ನು ಅರಿತಿರುವುದರಿಂದ ಭೋಗದತ್ತ ವಾಲುವುದಿಲ್ಲ. ಮಾನವೀಯತೆಯಿಂದ ವ್ಯವಹರಿಸುತ್ತಾರೆ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಂದಿಲ್ಲೊಂದು ಕಠಿಣ ಪ್ರಸಂಗವನ್ನು ಎದುರಿಸಿರುತ್ತಾರೆ. ಅವರ ವ್ಯಕ್ತಿತ್ವವೇ ಪರಿವರ್ತಿತವಾಗುವಂಥ ಸಂದರ್ಭಗಳು ಎದುರಾಗುತ್ತವೆ. ವ್ಯಕ್ತಿಯ ಸಾಮರ್ಥ್ಯವು ಅವನ ತೋಳ್ಬಲದಲ್ಲಿ, ಬುದ್ಧಿಯ ತೀಕ್ಷ್ಣತೆಯಲ್ಲಿ ಮಾತ್ರ ಇರುವುದಲ್ಲ. ಸಂಯಮವು ಕೂಡ ವ್ಯಕ್ತಿಯ ಬಲು ದೊಡ್ಡ ಶಕ್ತಿ. ಬಾಳಿನ ಕಾವನ್ನು ಸಹಿಸಿಕೊಂಡವನು ಮಾಗುತ್ತಾನೆ, ಬೀಗದೆ ಬಾಗಿ ನಡೆಯುತ್ತಾನೆ. ಚಿನ್ನವು ಹೇಗೆ ಬೆಂಕಿಯ ಕಾವಿಗೆ ಹೊಳೆಯುವ ಒಡವೆಯಾಗುತ್ತದೆಯೋ ಹಾಗೆಯೇ ನೋವು-ಸಂಕಟಗಳು ವ್ಯಕ್ತಿಯ ದೌರ್ಬಲ್ಯಗಳನ್ನು ತೊಡೆದು ಉದ್ಧರಿಸುತ್ತವೆ.

ಹೀಗೆ ಪಾಪಕ್ಷಯವಾಗಿ ಜೀವನೋದ್ಧಾರವಾಗಬೇಕಿದ್ದರೆ ಜೀವನಾನುಭವವಷ್ಟೇ ಸಾಲದು, ಶಾಸ್ತ್ರವ್ಯಾಸಂಗವೂ ಬೇಕು. ಇವು ಬುದ್ದಿಗೆ ಬೆಳಕನ್ನು ನೀಡಿದರೆ, ಲೋಕಜೀವನದಿಂದ ಹೃದಯದ ಬೆಳಕು. ತನ್ನ ನೋವನ್ನು ಮರೆತು ಎಲ್ಲರೊಳಗೊಂದಾಗುವುದರಿಂದ, ಲೋಕದ ಕಷ್ಟಗಳಲ್ಲಿ ಸಹಾನುಭೂತಿಯನ್ನು ಹೊಂದುವುದರಿಂದ ಸ್ವಾರ್ಥ, ಮತ್ಸರಗಳಂಥ ಸಣ್ಣತನಗಳು ದೂರವಾಗುತ್ತವೆ. ಮನಸ್ಸು ಹದವಾಗುತ್ತದೆ. ಸ್ವಾರ್ಥಾಪೇಕ್ಷೆ ಇಲ್ಲದೆ ಸಮಾಜ ಸೇವೆಯನ್ನು ಮಾಡುವ ಪ್ರಯತ್ನವು ಆತ್ಮವಿಸ್ತಾರಕ್ಕೆ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಮತಿಯ ಕಿಂಚಿತ್ ಪ್ರಯತ್ನ ಕೂಡ ಜೀವ ಪ್ರಗತಿ ಮತ್ತದೇ ಜೀವ ಪ್ರಕೃತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net