

ನವದಹೆಲಿ: ಪಶುವೈದ್ಯರೊಬ್ಬರು ಕೋಳಿತ್ಯಾಜ್ಯದಿಂದ ಬಯೋಡೀಸೆಲ್ ಕಂಡುಹಿಡಿದಿದ್ದು, ಅದಕ್ಕೀಗ ಪೇಟೆಂಟ್ ಕೂಡ ಸಿಕ್ಕಿದೆ. ಕೇರಳದ ಪಶುವೈದ್ಯಕೀಯ ಕಾಲೇಜೊಂದರ ಅಸೋಸಿಯೇಟ್ ಪ್ರೊಫೆಸರ್ ಜಾನ್ ಅಬ್ರಹಾಂ ಇಂಥದ್ದೊಂದು ಸಂಶೋಧನೆ ನಡೆಸಿದ್ದಾರೆ.
ಚಿಕನ್ ಸ್ಟಾಲ್ ಹಾಗೂ ಹೋಟೆಲ್ಗಳಲ್ಲಿ ಸಿಗುವ ಕೋಳಿಯ ತ್ಯಾಜ್ಯವನ್ನು ಬಯೋಡೀಸೆಲ್ ಆಗಿ ಪರಿವರ್ತಿಸುವ ಕುರಿತಂತೆ 2009-12ರ ಅವಧಿಯಲ್ಲೇ ಜಾನ್ ಸಂಶೋಧನ ನಡೆಸಿ ಯಶಸ್ವಿಯಾಗಿದ್ದರು. ಈ ಬಯೋಡೀಸೆಲ್ 38 ಕಿ.ಮೀ. ಮೈಲೇಜ್ ಕೊಡಲಿದ್ದು, ಈಗಿನ ಇಂಧನ ಬಳಕೆಯಿಂದ ಆಗುವ ಮಾಲಿನ್ಯವನ್ನು ಶೇ. 40ರಷ್ಟು ತಗ್ಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅವರ ಈ ಸಂಶೋಧನೆಗೆ ಜುಲೈ 7ರಂದು ಪೇಟೆಂಟ್ ಲಭಿಸಿದೆ.
ಹಕ್ಕಿ ಹಾಗೂ ಹಂದಿಗಳಿಂದ ಹೆಚ್ಚಿನ ಫ್ಯಾಟ್ ಸ್ಯಾಚುರೇಷನ್ ಲಭ್ಯವಿರುವುದರಿಂದ ಅವುಗಳಿಂದ ಕೊಠಡಿ ಉಷ್ಣತೆಯಲ್ಲೇ ತೈಲವನ್ನು ಸಂಸ್ಕರಿಸಬಹುದು. ಮಾತ್ರವಲ್ಲ, ಚಿಕನ್ ವೇಸ್ಟ್ ಕಡಿಮೆ ದರದಲ್ಲಿ ಹಾಗೂ ಸುಲಭದಲ್ಲಿ ಲಭಿಸುವುದರಿಂದ ಬಯೋಡೀಸೆಲ್ ಕಂಡುಹಿಡಿಯಲು ಅದನ್ನು ಬಳಸಿದೆ ಎಂಬುದಾಗಿ ಜಾನ್ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಬಯೋಡೀಸೆಲ್ನಲ್ಲಿ ಹೆಚ್ಚಿನ ಆಮ್ಲಜನಕ ಇರುವುದರಿಂದ ಇಂಜಿನ್ ಕ್ಷಮತೆ ಕೂಡ ಉತ್ತಮವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)