ಸಿಇಟಿ ಸೆಲ್‌ನಲ್ಲಿ ಪಾಸ್‌ಪೋರ್ಟ್ ಕಚೇರಿ ಮಾದರಿ ವ್ಯವಸ್ಥೆ

KEA
Published on

ಬೆಂಗಳೂರು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (ಕೆಇಎ) ವಿವಿಧ ವೃತ್ತಿಪರ ಕೋರ್ಸುಗಳ ಕೌನ್ಸೆಲಿಂಗ್‌ಗೆ ಬರುವ ಅಭ್ಯರ್ಥಿಗಳಿಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಕುಂದುಕೊರತೆಗಳನ್ನು ನೀಗಿಸಲು ಪಾಸ್‌ಪೋರ್ಟ್ ಕಚೇರಿ ಮಾದರಿ ವ್ಯವಸ್ಥೆ ಆರಂಭಿಸಲು ಚರ್ಚಿಸಿದೆ.

ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಉಭಯ ಇಲಾಖಾ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಕೆಇಎ ಕಚೇರಿ ಆವರಣದಲ್ಲಿ ಪಾಸ್‌ಪೋರ್ಟ್ ಕಚೇರಿ ಮಾದರಿಯಲ್ಲಿ ಕೌನ್ಸೆಲಿಂಗ್‌ಗೆ ಬರುವ ವಿದ್ಯಾರ್ಥಿಗಳು ಕುಳಿತುಕೊಳ್ಳಲು, ಕಾಯಲು ಪ್ರತ್ಯೇಕ ಪ್ರದೇಶ ಅಥವಾ ಸಭಾಂಗಣ ಸೃಷ್ಟಿಸಲಾಗುತ್ತದೆ. ಅಲ್ಲಿ ಯಾವ್ಯಾವ ಮಾಹಿತಿಯನ್ನು ಎಲ್ಲಿ ಪಡೆಯಬೇಕು, ಸಮಸ್ಯೆಗಳಿದ್ದರೆ ಎಲ್ಲಿ ತಿಳಿಸಿ ಪರಿಹಾರ ಪಡೆಯಬೇಕು ಎನ್ನುವ ಬಗ್ಗೆ ಡಿಜಿಟಲ್ ಲಕಗಳನ್ನು ಅಳವಡಿಸಲು ಚರ್ಚಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಪಾಲಕರು ಕೆಇಎ ಕಚೇರಿಗೆ ಬರುವ ಮುನ್ನ ಆನ್‌ಲೈನ್ ಮೂಲಕ ಅಪಾಯಿಂಟ್‌ಮೆಂಟ್ ಪಡೆದುಕೊಂಡು ತಮಗೆ ನಿಗದಿಯಾದ ದಿನ ಹಾಗೂ ಸಮಯದಂದು ಆಗಮಿಸಿ ಸಂಬಂಧಿಸಿದ ವಿಭಾಗಗಳಿಗೆ ತೆರಳಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ.

ವಿದ್ಯಾರ್ಥಿಗಳು ಮತ್ತು ಪಾಲಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ತರುವ ತೀರ್ಮಾನ ಮಾಡಲಾಗಿದೆ. ಈಗಿರುವ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಕೆಇಎ ಕಚೇರಿಗೆ ಬಂದು ಅಧಿಕಾರಿಗಳನ್ನು ಭೇಟಿಗೆ ಕಾಯಬೇಕು. ದೂರದಿಂದ ಬಂದವರಿಗೆ ಕೆಲವು ಸಲ ಅಧಿಕಾರಿಗಳ ಭೇಟಿ ಸಾಧ್ಯವಾಗದೆಯೂ ಹೋಗಬಹುದು. ಆದರೆ, ಮೊದಲೇ ಆನ್‌ಲೈನ್‌ನಲ್ಲಿ ಅಪಾಯಿಂಟ್ ಮೆಂಟ್ ತೆಗೆದುಕೊಂಡು ಬಂದರೆ ಅಂದು ತಪ್ಪದೇ ಅಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆ ಪರಿಹರಿಸಿಕೊಳ್ಳಬಹುದು. - ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net