ಶ್ರೀರಂಗಪಟ್ಟಣ : ಸಾಧಿಸುವ ಹಠವಿದ್ದರೆ ಸಾವಿಗೂ ಸವಾಲು ಎಸೆಯುವ ಛಲವಿರಬೇಕು ಎಂಬ ಹಿರಿಯರ ಮಾತು ಅಕ್ಷರ ಸಹ ಸತ್ಯವಾಗಿದ್ದು, ಇಲ್ಲೊಬ್ಬ ವಿದ್ಯಾರ್ಥಿನಿ ಸಾವಿನೊಂದಿಗೆ ಸೆಣಸಾಡುತ್ತಲೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಶಿಕ್ಷಣದಲ್ಲಿ ತನ್ನ ಛಲವನ್ನು ಪ್ರದರ್ಶಿಸಿದ್ದಾಳೆ.
ಮೇ 2ರ ಶುಕ್ರವಾರ ಹೊರಬಿದ್ದ 2024-25 ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಮೂಳೆ ಕ್ಯಾನ್ಸರ್ ವಿರುದ್ಧ ಸೆಣಸಾಡುತ್ತಿರುವ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ವಿನುತಾ ತನ್ನ ನೋವಿನಲ್ಲೂ ಪರೀಕ್ಷೆ ಬರೆದು 307 ಅಂಕಗಳೊಂದಿಗೆ ಉತ್ತೀರ್ಣಳಾಗಿ ಎಲ್ಲರ ಶ್ಲಾಘನೆಗೆ ಒಳಗಾಗಿದ್ದಾಳೆ.
ದೇಹಕ್ಕೆ ಕಾಡುತ್ತಿದ್ದ ನೋವನ್ನು ಮನಸ್ಸಿಗೆ ಪಡೆಯದ ವಿನುತಾ ಕಾಯಿಲೆ ಕಾರಣದ ನೆಪವೊಡ್ಡಿ ತನ್ನ ಶಿಕ್ಷಣ ಮೊಟಕುಗೊಳಿಸದೆ, ಶಿಕ್ಷಕರ ಮಾರ್ಗದರ್ಶನ ಹಾಗೂ ಸಹಪಾಠಿಗಳ ನೆರವಿನಿಂದ ಶಾಲೆಯ ಪಠ್ಯ ಕ್ರಮಗಳ ತರಬೇತಿಯನ್ನು ಅವಶ್ಯ ಸಮಯದಲ್ಲಿ ಪಡೆದು ಪ್ರಸಕ್ತ ಸಾಲಿನ ಪರೀಕ್ಷೆಯಲ್ಲಿ ಎಲ್ಲ ವಿಷಯಗಳ ಪ್ರಶ್ನೆ ಪತ್ರಿಕೆಗಳಿಗೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟು ನೋವು ಕೊಡುತ್ತಿದ್ದ ಬಲಗೈನಲ್ಲೇ ಸಮರ್ಥವಾಗಿ ಉತ್ತರ ಬರೆದು ಇದೀಗ ಉತ್ತೀರ್ಣವಾಗುವ ಮೂಲಕ ಸಾಧನೆಗೈದಿದ್ದಾಳೆ.
ತಾಲೂಕಿನ ಬಲ್ಲೇನಹಳ್ಳಿ ಗ್ರಾಮದ ಕಡು ಬಡತನದ ಕುಟುಂಬ ಹೇಮಾ ಮತ್ತು ಸದಾನಂದ ಅವರ ಹಿರಿಯ ಪುತ್ರಿ ವಿನುತಾ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿದ್ದು, ಅತ್ಯಂತ ಕ್ರೀಯಾಶೀಲಳಾಗಿ ಆಟ-ಪಾಠಗಳಲ್ಲೂ ಮುಂದಿದ್ದಳು. ಬಡತನವಿದ್ದರೂ ಸಂತಸವಿದ್ದ ಕುಟುಂಬದ ವಿನುತಾಳಿಗೆ ಈ ನಡುವೆ ಹಠಾತ್ತನೆ ಕಾಡಿದ 2ನೇ ಹಂತದ ಮೂಳೆ ಕ್ಯಾನ್ಸರ್‌ಗೆ ತುತ್ತಾಗಿ ಕಳೆದ ಎರಡು ವರ್ಷಗಳಿಂದ ಸಾಕಷ್ಟು ನೋವು ಮತ್ತು ಯಾತನೆ ಅನುಭವಿಸಿದ್ದಾಳೆ. ಆರ್ಥಿಕ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಕ್ಯಾನ್ಸರ್ ಹೆಸರು ಕೇಳಿಯೇ ಮನೋಬಲ ಕುಗ್ಗಿಸಿಬಿಟ್ಟಿತ್ತು.
ಬಲಗೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ವಿದ್ಯಾರ್ಥಿನಿ: ವಿನುತಾಳ ತಂದೆ ಸದಾನಂದ ಅಸಹಾಯಕರಾಗಿದ್ದು, ತಾಯಿ ಹೇಮಾ ಖಾಸಗಿ ಆಸ್ಪತ್ರೆಯಲ್ಲಿ ಸ್ವಚ್ಛತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿಕೊಂಡು ಯಾವುದೇ ಆದಾಯ ಹಾಗೂ ಆಸ್ತಿಮೂಲಗಳಿಲ್ಲದೆ ಬಾಡಿಗೆ ಮನೆಯಲ್ಲಿ ಜೀವನ ನಡೆಸುತ್ತಿದ್ದಾರೆ. ಈ ನಡುವೆ ಮಗಳಿಗೆ ಎದುರಾದ ಪರಿಸ್ಥಿತಿಯಿಂದ ನೊಂದ ತಾಯಿ ಸಾಕಷ್ಟು ಕಷ್ಟಗಳನ್ನು ಎದುರಿಸಿ ಕೊನೆಗೆ ಮಾಧ್ಯಮಗಳ ನೆರವಿನ ಮೂಲಕ ಕೆಲ ಹೃದಯವಂತರು ಹಾಗೂ ಸಂಘ ಸಂಸ್ಥೆಗಳು ನೀಡಿದ ಸಣ್ಣ ನೆರವಿನಿಂದ ವರ್ಷದ ಹಿಂದೆ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯ ವೆಚ್ಚ ಭರಿಸಿ ಮಗಳನ್ನು ಕಿಮೋ ಥೆರಪಿಗೆ ಒಳಪಡಿಸಿ ಬಲತೋಳಿನ ಭುಜದ ಕೀಲು ಮೂಳೆ ಶಸ್ತ್ರ ಚಿಕಿತ್ಸೆ ನಡೆಸಿ ಪ್ಲೇಟ್‌ಗಳ ಜೋಡಣೆ ಮಾಡಲಾಗಿದೆ. ಆದರೆ ಶಸ್ತ್ರ ಚಿಕಿತ್ಸೆ ಬಳಿಕವೂ ಪುನಃ ಸಮಸ್ಯೆ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷಾ ಪೂರ್ವ ಸಿದ್ಧತೆಯ ಸಮಯದಲ್ಲಿ ವಿದ್ಯಾರ್ಥಿನಿಯನ್ನು ಮತ್ತೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದೆ. 10 ದಿನಗಳ ಬಳಿಕ ಈ ನೋವಿನ ನಡುವೆಯೂ ವಿನುತಾ ತನ್ನ ಗ್ರಾಮದಿಂದ ಒಂಟಿಯಾಗಿಯೇ ಪಟ್ಟಣಕ್ಕೆ ಆಗಮಿಸಿ ಪರೀಕ್ಷೆ ಎದುರಿಸಿದ್ದಳು
----------
2022-23 ಸಾಲಿನಲ್ಲಿ ಅಂದು ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲೆಯ ಎಸ್‌ಡಿಎಂಎಸಿ ಅಧ್ಯಕ್ಷನಾಗಿದ್ದು, ವಿದ್ಯಾರ್ಥಿನಿಯ ಸಂಕಷ್ಟ ತಿಳಿದು ಸಹಕಾರ ನೀಡಲು ಮುಂದಾದೆ. ಜತೆಗೆ ತಾಲೂಕಿನ ಬಲ್ಲೇನಹಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಮತ್ತು ಅರಿವು ಕೇಂದ್ರದ ಗ್ರಂಥಪಾಲಕನಾದ ನಾನು ವಿದ್ಯಾರ್ಥಿನಿಯ ಕುಟುಂಬ ಹಾಗೂ ಆರ್ಥಿಕ ಪರಿಸ್ಥಿತಿ ಅರಿತು ನನಗೆ ತಿಳಿದ ಸ್ನೇಹಿತರು ಹಾಗೂ ಸಂಘ ಸಂಸ್ಥೆಗಳೋಂದಿಗೆ ನೆರವಾಗಿ ಮಾಧ್ಯಮ ಸಹಕಾರ ಕೋರಿದವು. ವಿದ್ಯಾರ್ಥಿನಿ ತನಗಿರುವ ನೋವನ್ನು ಮೆಟ್ಟಿ ಶಿಕ್ಷಣಕ್ಕೆ ಆದ್ಯತೆ ನೀಡಿರುವುದು ಅವಳ ಕಾಳಜಿ ಮತ್ತು ಬದ್ದತೆಗೆ ಸಾಕ್ಷಿಯಾಗಿದೆ.
ಸೋಮಶೇಖರ್
ಗ್ರಂಥಪಾಲಕ
ಬೇಕಿದೆ ಆರ್ಥಿಕ ನೆರವು : ವಿದ್ಯಾರ್ಥಿನಿ ವಿನುತಾ ತಾನೊಬ್ಬ ಮಾದರಿ ಶಿಕ್ಷಕಿಯಾಗಬೇಕು ಎಂಬ ಮಹಾದಾಸೆ ಹೊಂದಿದ್ದು, ಇದಕ್ಕಾಗಿ ಅವಶ್ಯವಿರುವ ಶಿಕ್ಷಣ ಮತ್ತು ತರಬೇತಿಯನ್ನು ಪಡೆಯಲು ಇಚ್ಚಿಸಿದ್ದಾಳೆ. ಪ್ರಸ್ತುತ ಪ್ರತಿನಿತ್ಯವೂ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಈಕೆ ತನ್ನ ವೈದ್ಯಕೀಯ ಚಿಕಿತ್ಸೆ ಹಾಗೂ ಔಷಧಗಳ ವೆಚ್ಚ ಭರಿಸಲು ಸಾಕಷ್ಟು ಪರಿತಪಿಸುತ್ತಿದ್ದಾಳೆ. ಹೀಗಾಗಿ ವಿದ್ಯಾರ್ಥಿನಿ ಹಾಗೂ ಈಕೆಯ ತಾಯಿ ಹೇಮಾ ಮುಂದಿನ ಶಿಕ್ಷಣದ ನೆರವಿನ ನೀರಿಕ್ಷೆಯಲ್ಲಿದ್ದಾರೆ. ಸಹಾಯ ಮಾಡಲಿಚ್ಚಿಸುವ ದಾನಿಗಳು ಕರ್ಣಾಟಕ ಬ್ಯಾಂಕ್ ಖಾತೆ ಸಂಖ್ಯೆ :7092500101895101, ಐಎಫ್‌ಎಸ್‌ಸಿ ಕೋಡ್: ಕೆಆರ್‌ಬಿ 0000709 ಅಥವಾ ಯುಪಿಐ ಮಾಡಲು ಮೊಬೈಲ್ ಸಂಖ್ಯೆ: 7090221842 ಸಂಪರ್ಕಿಸಬಹುದು.