

ನವದೆಹಲಿ: ಕರೊನಾ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಐದು ರಾಜ್ಯಗಳಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಹೋಗಬೇಕೆಂದರೆ ಕೋವಿಡ್ ಪರೀಕ್ಷೆ ಕಡ್ಡಾಯ ಮಾಡುವ ನಿರ್ಧಾರವನ್ನು ದೆಹಲಿ ಸರ್ಕಾರ ತೆಗೆದುಕೊಂಡಿದೆ. ಹೀಗಾಗಿ ಮಹಾರಾಷ್ಟ್ರ, ಕೇರಳ, ಪಂಜಾಬ್, ಛತ್ತೀಸಗಡ ಮತ್ತು ಮಧ್ಯಪ್ರದೇಶಗಳಿಂದ ವಿಮಾನ, ರೈಲು ಅಥವಾ ಬಸ್ಗಳಲ್ಲಿ ಪ್ರಯಾಣ ಮಾಡುವವರು ದೆಹಲಿ ಪ್ರವೇಶಿಸುವ ಮುನ್ನ ಕರೊನಾ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟೀವ್ ಬಂದಿರುವ ವರದಿಯನ್ನು ತೋರಿಸಲೇಬೇಕು.
ಶುಕ್ರವಾರ(ಫೆಬ್ರವರಿ 26) ಮಧ್ಯರಾತ್ರಿಯಿಂದ ಮಾರ್ಚ್ 15 ಮಧ್ಯಾಹ್ನದವರೆಗೆ ಈ ನಿಯಮವು ಜಾರಿಯಾಗಲಿದೆ. ಹೀಗಾಗಿ ಈ ರಾಜ್ಯಗಳ ಅಧಿಕಾರಿಗಳು, ದೆಹಲಿಗೆ ಹೊರಟ ಪ್ರಯಾಣಿಕರ ಬಳಿ 72 ಗಂಟೆಗಳ ಈಚಿನ ಕೋವಿಡ್ ನೆಗೆಟೀವ್ ವರದಿ ಹೊಂದಿರುವ ಎಂಬ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕಾಗಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದೊಂದಿಗೆ ಸಭೆ ನಡೆಸಿದ ನಂತರ ದೆಹಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದ್ದು, ಈ ಬಗ್ಗೆ ಅಧಿಕೃತ ಆದೇಶವು ಶೀಘ್ರದಲ್ಲೇ ಜಾರಿಯಾಗಲಿದೆ.
ಕಳೆದ ವಾರ ದೇಶದಲ್ಲಿ ವರದಿಯಾಗಿರುವ ಒಟ್ಟು ಕರೊನಾ ಪ್ರಕರಣಗಳಲ್ಲಿ ಶೇ. 86 ರಷ್ಟು ಪ್ರಕರಣಗಳು ಈ ಐದು ರಾಜ್ಯಗಳಿಗೆ ಸೇರಿದ್ದೇ ಆಗಿವೆ. ಶೇ 75 ರಷ್ಟು ಪ್ರಕರಣಗಳು ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಸೇರಿದವಾಗಿವೆ. ಮಂಗಳವಾರ, ಮಹಾರಾಷ್ಟ್ರದಲ್ಲಿ 5,210 ಹೊಸ ಪ್ರಕರಣಗಳು ದಾಖಲಾಗಿದ್ದು, ಕೇರಳದಲ್ಲಿ 2,212 ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 18, ಕೇರಳದಲ್ಲಿ 16 ಮತ್ತು ಪಂಜಾಬ್ನಲ್ಲಿ 15 ಕರೊನಾ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಏರಿಕೆಯಿಂದಾಗಿ ದೇಶದಲ್ಲಿ ಕರೊನಾದ ಎರಡನೇ ಅಲೆ ಸೃಷ್ಟಿಯಾಗಬಹುದೆಂಬ ಭೀತಿ ಉಂಟಾಗಿದ್ದು, ಕೇಂದ್ರ ಸರ್ಕಾರ ದೇಶಾದ್ಯಂತ ಕಠಿಣ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಆದೇಶಿಸಿದೆ. ಕರ್ನಾಟಕ, ತಮಿಳುನಾಡು, ಉತ್ತರಾಖಂಡ ಸೇರಿದಂತೆ ಇತರ ಕೆಲವು ರಾಜ್ಯಗಳು ಈಗಾಗಲೇ ಕರೊನಾ ಪರೀಕ್ಷೆಯ ನಿರ್ಬಂಧವನ್ನು ಈ ಐದು ರಾಜ್ಯಗಳ ಪ್ರಯಾಣಿಕರ ಮೇಲೆ ವಿಧಿಸಿವೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ