More

    ಮತ್ತೆ ಕರೊನಾ ಕಟ್ಟೆಚ್ಚರ; 2ನೇ ಅಲೆ ತಡೆಗೆ ರಾಜ್ಯದಲ್ಲಿ ಕಠಿಣ ನಿಯಮ ಜಾರಿ

    ಬೆಂಗಳೂರು: ಮಹಾರಾಷ್ಟ್ರದ ಎರಡು ಜಿಲ್ಲೆಗಳಲ್ಲಿ ಕರೊನಾ ವೈರಸ್​ನ ಹೊಸ ರೂಪಾಂತರಿ ಪ್ರಭೇದ ಪತ್ತೆಯಾಗಿರುವುದು ಹಾಗೂ ಕೇರಳದಲ್ಲೂ ಸೋಂಕು ಪ್ರಕರಣ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯದಲ್ಲೂ ಕೋವಿಡ್ ನಿಯಮಾವಳಿಗಳನ್ನು ಮತ್ತಷ್ಟು ಬಿಗಿಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಗಡಿ ಪ್ರದೇಶದಲ್ಲಿ ನಿಗಾ ಇಡಲಾಗಿದ್ದು, ಒಂದೊಮ್ಮೆ ಪ್ರಕರಣ ಮಿತಿಮೀರಿದಲ್ಲಿ ಮತ್ತೆ ಲಾಕ್​ಡೌನ್ ಜಾರಿಗೊಳಿಸುವ ಕುರಿತೂ ಸರ್ಕಾರ ಚಿಂತನೆ ನಡೆಸಿರುವುದಾಗಿ ತಿಳಿದು ಬಂದಿದೆ.

    ಕರೊನಾ ನಿಯಂತ್ರಣಕ್ಕೆ ಬಂದಿದೆ ಎಂದು ಜನರು ನಿಯಮ ಪಾಲಿಸುತ್ತಿಲ್ಲ. ಮದುವೆ, ಸಭೆ, ಸಮಾರಂಭ, ಪಾದಯಾತ್ರೆ, ಜಾತ್ರೆಗಳಲ್ಲೂ ಮಾಸ್ಕ್ ನಾಪತ್ತೆಯಾಗಿದೆ. ಸಾಮಾಜಿಕ ಅಂತರ ಕಾಣೆಯಾಗಿದೆ. ಇಂತಹ ಸಂದರ್ಭದಲ್ಲೇ ನೆರೆ ರಾಜ್ಯಗಳಲ್ಲಿ ಸೋಂಕು ಪ್ರಕರಣ ಹೆಚ್ಚುತ್ತಿರುವುದರಿಂದ 2ನೇ ಅಲೆ ಬಾರದಂತೆ ಮುನ್ನೆಚ್ಚರಿಕೆಗೆ ಸರ್ಕಾರ ಮುಂದಾಗಿದೆ.

    ಸದ್ಯಕ್ಕಿಲ್ಲ ಜನರಿಗೆ ಲಸಿಕೆ: ಈಗಾಗಲೇ ಆರೋಗ್ಯ ಕಾರ್ಯಕರ್ತರು, ಪೊಲೀಸರು, ಕಂದಾಯ ಇಲಾಖೆ ಹಾಗೂ ಪಾಲಿಕೆ ನೌಕರರಿಗೆ ಲಸಿಕೆ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ 50 ವರ್ಷದೊಳಗಿನ ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವವರಿಗೆ 3ನೇ ಹಂತದಲ್ಲಿ ಲಸಿಕೆ ನೀಡಲು ಪಟ್ಟಿ ತಯಾರಿಸಲಾಗುತ್ತಿದೆ. ಇವರಿಗೆ ಮಾರ್ಚ್ ಕೊನೇ ವಾರದಲ್ಲಿ ಲಸಿಕೆ ಸಿಗುವ ನಿರೀಕ್ಷೆಯಿದೆ.

    ನೆರೆಹೊರೆ ಬರೆ: ಫೆ.10 ರಿಂದ 18ರವರೆಗೆ ಕೇರಳದಲ್ಲಿ 38,058 ಹಾಗೂ ಮಹಾರಾಷ್ಟ್ರದಲ್ಲಿ 29,267 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಈ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವವರಿಗೆ ಯಾವುದೇ ನಿರ್ಬಂಧವಿಲ್ಲವಾದ್ದರಿಂದ ಬಸ್, ರೈಲು, ವಿಮಾನ ಹಾಗೂ ಖಾಸಗಿ ವಾಹನಗಳ ಮೂಲಕ ಹೆಚ್ಚಿನ ಜನರು ಬರುತ್ತಿದ್ದಾರೆ. ಫೆ.16ರವರೆಗೆ ಎಲ್ಲರನ್ನೂ ಸೋಂಕು ಪರೀಕ್ಷೆಗೊಳಪಡಿಸದೆ ರಾಜ್ಯ ಪ್ರವೇಶಕ್ಕೆ ಬಿಟ್ಟಿರುವ ಪರಿಣಾಮ ಅವರಿಂದ ಮತ್ತಷ್ಟು ಜನರಿಗೆ ಸೋಂಕು ಹರಡಿರುವ ಸಾಧ್ಯತೆಯಿದೆ.

    ನಿಯಮ ಪಾಲನೆಗೆ ಒತ್ತು: ಕರೊನಾ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ (3.25 ಚ.ಮೀ) ಪಾಲನೆಯನ್ನು ಪುನಃ ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ಸೇರಿ ಎಲ್ಲ ನಗರ, ಪಟ್ಟಣಗಳಲ್ಲಿ ಕೋವಿಡ್ ನಿಯಮ ಉಲ್ಲಂಘನೆಗೆ ಮತ್ತೆ ದಂಡ ವಿಧಿಸಲು ಪೊಲೀಸರ ಜತೆಗೆ ಪಾಲಿಕೆ ಸಿಬ್ಬಂದಿ ಮುಂದಾಗುತ್ತಿದ್ದಾರೆ. ಇನ್ನು ಸಭೆ, ಸಮಾರಂಭ, ಮದುವೆ ಹಾಗೂ ಸಮಾವೇಶ, ಜಾತ್ರೆ ಹೆಚ್ಚಾಗಿದ್ದು, ಇಲ್ಲಿ ಒಬ್ಬ ಸೋಂಕಿತನಿದ್ದರೂ ಸೂಪರ್ ಸ್ಪ್ರೆಡರ್ ಆಗುವ ಸಾಧ್ಯತೆಯಿದೆ.

    ರಾಜ್ಯದಲ್ಲಿ ಈವರೆಗೆ ಕರೊನಾ 2ನೇ ಅಲೆ ಕಾಣಿಸಿಕೊಂಡಿಲ್ಲ. ಆದರೆ, ಜನರು ಮಾಸ್ಕ್ ಧರಿಸುವುದು, ವ್ಯಕ್ತಿಗತ ಅಂತರ ಪಾಲನೆ ಮುಂದುವರಿಸಬೇಕು, ಗುಂಪು ಸೇರುವುದನ್ನು ನಿಲ್ಲಿಸಬೇಕು. ಸೋಂಕು ಹರಡುವಿಕೆ ನಿಯಂತ್ರಿಸುವಲ್ಲಿ ಜನರು ಮತ್ತು ಸರ್ಕಾರದ ಸಮಪಾಲಿದೆ.

    | ಡಾ.ವಿ. ರವಿ ವೈರಾಣು ತಜ್ಞ (ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯ)

    ಮಹಾರಾಷ್ಟ್ರದಲ್ಲಿ ಹೊಸ ಪ್ರಭೇದ

    ಮಹಾರಾಷ್ಟ್ರದ ಅಮರಾವತಿ ಮತ್ತು ಯಾವತ್ಮಲ್ ಜಿಲ್ಲೆಗಳಲ್ಲಿ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ ಕರೊನಾ ವೈರಸ್​ನ ಎರಡು ಹೊಸ ರೂಪಾಂತರಿ ಪ್ರಭೇದಗಳು ಪತ್ತೆಯಾಗಿವೆ. ಸ್ಯಾಂಪಲ್​ಗಳ ಜಿನೋಮ್ ಸಿಕ್ವೆನ್ಸಿಂಗ್​ನಲ್ಲಿ ಬ್ರಿಟನ್, ದಕ್ಷಿಣ ಆಫ್ರಿಕಾ ಅಥವಾ ಬ್ರೆಜಿಲ್ ಪ್ರಭೇದಗಳು ಪತ್ತೆಯಾಗದೆ ಬೇರೆಯೇ ಪ್ರಭೇದಗಳು ಕಂಡುಬಂದಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಗಡಿಯಲ್ಲಿ ಹದ್ದಿನ ಕಣ್ಣು: ಮಹಾರಾಷ್ಟ್ರದಲ್ಲಿ ಕರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಗ್ರಾಮಗಳಲ್ಲಿ ಹೈ ಅಲರ್ಟ್ ಆಗಿರಲು ಬೆಳಗಾವಿ ಜಿಲ್ಲಾಡಳಿತಕ್ಕೆ ಆರೋಗ್ಯ ಇಲಾಖೆ ಸೂಚಿಸಿದೆ. ಮುಂಬೈ, ಪುಣೆ, ಕೊಲ್ಲಾಪುರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಬೆಳಗಾವಿ ಗಡಿಗೆ ಹೊಂದಿಕೊಂಡಿರುವ ಮಹಾರಾಷ್ಟ್ರದ ಕೆಲ ಗ್ರಾಮಗಳಲ್ಲಿ ಅಲ್ಲಿನ ಸರ್ಕಾರ ಮತ್ತೆ ಲಾಕ್​ಡೌನ್ ಘೊಷಣೆ ಮಾಡಿದೆ. ಇದರಿಂದಾಗಿ ಬೆಳಗಾವಿ ಜಿಲ್ಲೆಯ ಕಾಗವಾಡ, ನಿಪ್ಪಾಣಿ, ಅಥಣಿ, ಚಿಕ್ಕೋಡಿ, ಖಾನಾಪುರ, ಬೆಳಗಾವಿ ನಗರ ಮುಂತಾದ ಪ್ರದೇಶಗಳಲ್ಲೂ ಮತ್ತೆ ಲಾಕ್​ಡೌನ್ ಆತಂಕದ ಗಾಳಿ ಬೀಸುತ್ತಿದೆ.

    ಪ್ರಮಾಣಪತ್ರ ಕಡ್ಡಾಯ: ಕೇರಳ, ಮಹಾರಾಷ್ಟ್ರದಿಂದ ಬರುವವರಿಗೆ ಕರೊನಾ ನೆಗೆಟಿವ್ ಪ್ರಮಾಣಪತ್ರ ಕಡ್ಡಾಯ, ಪ್ರಮಾಣಪತ್ರ ಇರದಿದ್ದಲ್ಲಿ 14 ದಿನ ಕ್ವಾರಂಟೈನ್​ಗೆ ಒಳಪಡಬೇಕು.

    ಮಾರ್ಚ್ 24ರಿಂದ 13ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

    ಇಡೀ ಊರಿಗೇ ಕೇಳಿಸುತ್ತಿತ್ತು ಈ ಮನುಷ್ಯನ ಗೊರಕೆ; ವಿಡಿಯೋ ಕೂಡ ವೈರಲ್​ ಆಯ್ತು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts