ತಪ್ಪು ಪತ್ತೆಹಚ್ಚಿದ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಜೇಬುಗಳ್ಳರು! ಮೂಕ ಪ್ರೇಕ್ಷಕರಾದ ಸಾರ್ವಜನಿಕರು

WhatsApp-Image-2024-05-18-at-10.19.31-AM
Published on

ನವದೆಹಲಿ: ಪ್ರಯಾಣಿಕರಿಂದ ತುಂಬಿದ್ದ ಸಾರ್ವಜನಿಕರ ಸಾರಿಗೆಯಲ್ಲಿ ಪಿಕ್​ಪಾಕೆಟ್​ ಮಾಡಲು ಬಂದಿದ್ದ ಐದಕ್ಕೂ ಹೆಚ್ಚು ಜೇಬುಗಳ್ಳರ ಗುಂಪೊಂದು ಅನಾಮಧೇಯ ಪ್ರಯಾಣಿಕನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಘಟನೆ ದೆಹಲಿಯಲ್ಲಿ ವರದಿಯಾಗಿದೆ. ತಮ್ಮ ಕಣ್ಣು ಮುಂದೆಯೇ ಸಹ ಪ್ರಯಾಣಿಕನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿದ್ದರು, ಬಸ್​ನಲ್ಲಿದ್ದ ಒಬ್ಬರು ಸಹ ಸಹಾಯಕ್ಕೆ ಬಾರದೆ ಹೋಗಿದ್ದು, ನೆಟ್ಟಿಗರನ್ನು ಕೆರಳಿಸಿದೆ.

ಬಸ್‌ನೊಳಗೆ ಏಕಾಏಕಿ ನುಗ್ಗಿದ ಜೇಬುಗಳ್ಳರು ಯುವಕನ ಮೇಲೆ ಹಿಗ್ಗಾಮುಗ್ಗಾ ಹೊಡೆದು, ಆತನನ್ನು ಅಮಾನುಷವಾಗಿ ಥಳಿಸಿ ಸಾರಿಗೆಯಿಂದ ಹೊರಕ್ಕೆ ತಳ್ಳಿದ ಘಟನೆ ಬಸ್​ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇಬ್ಬರ ನಡುವಿನ ಮಾರಾಮಾರಿಗೆ ಅಷ್ಟು ಪ್ರಯಾಣಿಕರು ಸಾಕ್ಷಿಯಾಗಿದ್ದು, ಒಬ್ಬರೂ ಸಹ ಯುವಕನನ್ನು ಪಾರು ಮಾಡುವ ಪ್ರಯತ್ನ ಸಹ ಮಾಡಿಲ್ಲ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಹ ಪ್ರಯಾಣಿಕರ ವಿರುದ್ಧ ನೆಟ್ಟಿಗರು ಕಿಡಿಕಾರಿದ್ದಾರೆ.

ಪ್ರಯಾಣಿಕನನ್ನು ಎಳೆದಾಡಿದ ಜೇಬುಗಳ್ಳರ ಗುಂಪು, ಆತನ ಬಟ್ಟೆ ಹರಿದು, ಕಾಲಿನಲ್ಲಿ ತುಳಿದು, ಕಪಾಳಮೋಕ್ಷ ಮಾಡಿರುವುದು ದೃಶ್ಯದಲ್ಲಿ ಕಾಣಬಹುದು. ಸದ್ಯ ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿರುವ ಸಾರ್ವಜನಿಕರು, ಸ್ಥಳೀಯ ಪೊಲೀಸರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net