

ಒಡಿಶಾ: ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಅಪರೂಪದ ಆಘಾತಕಾರಿ ರೈಲು ದುರಂತದಿಂದಾಗಿ ಸುಮಾರು 288ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 900ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದರು. ಇದೀಗ ಎಕ್ಸ್ಪ್ರೆಸ್ವೇ ದುರಸ್ತಿಗೊಂಡಿದ್ದು ಪ್ಯಾಸೆಂಜರ್ ರೈಲುಗಳು ಸಂಚರಿಸಲು ಶುರು ಮಾಡಿವೆ.
ನಿನ್ನೆಯಷ್ಟೇ ಕೇಂದ್ರ ರೈಲ್ವೇ ಇಲಾಖೆ ಸಚಿವ ಅಶ್ವಿನಿ ವೈಷ್ಣವ್ ಟ್ವೀಟ್ ಮಾಡಿ ಗೂಡ್ಸ್ ರೈಲು ಸಂಚಾರ ಆರಂಭವಾಗಿದ್ದ ಮಾಹಿತಿಯನ್ನು ಜನರೊಂದಿಗೆ ಹಂಚಿಕೊಂಡಿದ್ದರು. ಅದರೊಂದಿಗೆ "ರೈಲ್ವೆ ಅಧಿಕಾರಿಗಳು ಮತ್ತು ಸಿಬ್ಬಂದಿಯ ಅವಿರತ ಶ್ರಮದಿಂದ ಹಾನಿಗೊಳಗಾಗಿದ್ದ ಮಾರ್ಗವನ್ನು ಬೇಗ ದುರಸ್ತಿ ಮಾಡಲಾಗಿದೆ" ಎಂದು ಸಚಿವ ಅಶ್ವಿನಿ ವೈಷ್ಣವ್ ಟ್ವಿಟ್ ಮೂಲಕ ತಿಳಿಸಿದ್ದರು.
ಅದರಂತೆ ಬೆಂಗಳೂರು-ಹೌರಾ ಎಕ್ಸ್ಪ್ರೆಸ್ ರೈಲು ಅಪಘಾತಕ್ಕೆ ಈಡಾಗಿದ್ದ ಮಾರ್ಗದಲ್ಲಿ ಕಲ್ಲಿದ್ದಲು ತುಂಬಿದ್ದ ಗೂಡ್ಸ್ ಗಾಡಿಯೊಂದು ರೂರ್ಕೆಲಾ ಸ್ಟೀಲ್ ಪ್ಲಾಂಟ್ ಕಡೆಗೆ ಸಂಚಾರ ಮಾಡಿತ್ತು. ಇದೀಗ ಮೂರು ರೈಲುಗಳ ಭೀಕರ ಅಪಘಾತ ನಡೆದ 51 ಗಂಟೆಗಳ ಒಳಗಾಗಿ ಪ್ಯಾಸೆಂಜರ್ ರೈಲು ಅದೇ ಮಾರ್ಗದಲ್ಲಿ ಸಂಚಾರ ಮಾಡಿದೆ. ಈ ಬಗ್ಗೆ ಎಎನ್ಐ ವಿಡಿಯೋ ಒಂದನ್ನು ಟ್ವೀಟ್ ಮಾಡಿದೆ.