

ಪಣಜಿ: ಭಾರೀ ಮಳೆಯಿಂದ ಸಂಭವಿಸಿದ ಭೂಕುಸಿತದಿಂದಾಗಿ ಕರ್ನಾಟಕದ ಮಂಗಳೂರಿನಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ದಕ್ಷಿಣ ಗೋವಾದ ದೂಧ್ಸಾಗರ್ ಮತ್ತು ಸೊನಾಲಿಮ್ ನಡುವೆ ಶುಕ್ರವಾರ ಹಳಿತಪ್ಪಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ನೈರುತ್ಯ ರೈಲ್ವೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ರೈಲು ನಂಬರ್ 01134 ಮಂಗಳೂರು ಜಂಕ್ಷನ್ನಿಂದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ತೆರಳುತ್ತಿತ್ತು. ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಿಪ್ಲುನ್ ಮತ್ತು ಕಾಮಥೆ ನಡುವೆ ಇರುವ ವಶಿಷ್ಠಿ ನದಿ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಮಡಂಗಾವ್ ಲೊಂಡಾ ಮಿರಾಜ್ ಬದಲಿ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ತೆರಳುತ್ತಿತ್ತು. ಆದರೆ, ದೂಧ್ಸಾಗರ್ ಮತ್ತು ಸೊನೌಲಿಮ್ ಮಾರ್ಗ ಮಧ್ಯೆ ಭೂಕುಸಿತದಿಂದ ರೈಲು ಹಳಿತಪ್ಪಿದೆ.
ಮತ್ತೊಂದು ರೈಲು, ಹಜರತ್ ನಿಜಾಮುದ್ದೀನ್-ವಾಸ್ಕೋ ಡಾ ಗಾಮಾ ಎಕ್ಸ್‌ಪ್ರೆಸ್, ಭೂಕುಸಿತದಿಂದಾಗಿ ಕಾರಂಜೋಲ್ ಮತ್ತು ದುಧ್‌ಸಾಗರ್ ನಡುವಿನ ಹಳಿಗಳಲ್ಲಿ ನಿಲ್ಲಿಸಲಾಯಿತು. ರೈಲನ್ನು ಕರ್ನಾಟಕದ ಕ್ಯಾಸಲ್ ರಾಕ್ ನಿಲ್ದಾಣಕ್ಕೆ ಹಿಂತಿರುಗಿಸಲಾಯಿತು. (ಏಜೆನ್ಸೀಸ್)