ಚಲಿಸುತ್ತಿದ್ದ ವಿಮಾನದಿಂದ ಹಾರಿದ ಪ್ರಯಾಣಿಕ! ಬೆಚ್ಚಿಬೀಳಿಸಿದ ವಿಚಿತ್ರ ವರ್ತನೆ

plane
Published on

ಲಾಸ್​ ಏಂಜಲೀಸ್ : ಪ್ರಯಾಣಿಕನೊಬ್ಬ ಚಲಿಸುತ್ತಿರುವ ವಿಮಾನದಿಂದ ಕೆಳಗೆ ಹಾರಿರುವ ವಿಚಿತ್ರ ಘಟನೆಯೊಂದು ಅಮೆರಿಕದ ಲಾಸ್​ ಏಂಜಲೀಸ್​ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸಾಲ್ಟ್​ ಲೇಕ್ ಸಿಟಿಗೆ ಹೊರಟಿದ್ದ ಸ್ಕೈವೆಸ್ಟ್​ ಕಂಪೆನಿಯ ಯುನೈಟೆಡ್ ಎಕ್ಸ್​​ಪ್ರೆಸ್​ ವಿಮಾನವು ರಾತ್ರಿ 7 ಗಂಟೆಗೆ ಟೇಕ್​ ಆಫ್​ಗೆ ಸಿದ್ಧವಾದಂತೆ ಯಾತ್ರಿಯೊಬ್ಬ ವಿಮಾನದಿಂದ ಹೊರಹೋಗಲು ಈ ರೀತಿ ಪ್ರಯತ್ನ ಮಾಡಿದ್ದಾನೆ ಎನ್ನಲಾಗಿದೆ.

ಮೊದಲಿಗೆ ಕಾಕ್​​ಪಿಟ್​ನೊಳಗೆ ಪ್ರವೇಶಿಸಲು ಪ್ರಯತ್ನಿಸಿದ ಈ ಯಾತ್ರಿಯು ನಂತರ ಸರ್ವೀಸ್​​ ಡೋರನ್ನು ತೆಗೆಯಲು ಸಫಲನಾಗಿ, ಎಮರ್ಜೆನ್ಸಿ ಸ್ಲೈಡ್​​ನ ಮೂಲಕ ಟರ್ಮಾಕ್​ಗೆ ಹಾರಿದ. ಟ್ಯಾಕ್ಸಿವೇ ತಲುಪಿದ ಈ ಯಾತ್ರಿಯನ್ನು ಬಂಧಿಸಿ, ತದನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜೀವಕ್ಕೆ ಅಪಾಯವಾಗುವಂಥ ಪೆಟ್ಟು ಬಿದ್ದಿಲ್ಲ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯ ನಂತರ ವಿಮಾನವು ತನ್ನ ಗೇಟಿಗೆ ವಾಪಸಾಗಿ, ಮೂರು ಗಂಟೆಗಳ ನಂತರ ಮತ್ತೆ ಹೊರಟಿತು. ವಿಮಾನದಲ್ಲಿದ್ದ ಸಹಪ್ರಯಾಣಿಕರೆಲ್ಲ ತಬ್ಬಿಬ್ಬಾಗಿದ್ದರೂ, ಮತ್ಯಾರಿಗೂ ಯಾವುದೇ ಪೆಟ್ಟಾಗಿಲ್ಲ ಎಂದು ವಿಮಾನಾಧಿಕಾರಿಗಳು ತಿಳಿಸಿದ್ದಾರೆ. ಸದರಿ ಪ್ರಯಾಣಿಕನು ಆ ರೀತಿಯಾಗಿ ಏಕೆ ವರ್ತಿಸಿದ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಈ ಘಟನೆಯ ತನಿಖೆಯನ್ನು ಎಫ್​ಬಿಐಗೆ ವಹಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net