

ಬೆಂಗಳೂರು: ಕಾಂಗ್ರೆಸ್ ಅಪರೇಷನ್ ಹಸ್ತಕ್ಕೆ ಕೈ ಹಾಕಿದ ಬೆನ್ನಲ್ಲೇ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಚಟುವಟಿಕೆ ಗರಿಗೆದರಿವೆ.
ಲೋಕಸಭೆ ಚುನಾವಣೆ ಇನ್ನೂ ಒಂದು ವರ್ಷವಿರುವಾಗಲೇ ಬಿಜೆಪಿ ಚುನಾವಣಾ ರಣಕಹಳೆ ಮೊಳಗಿಸಿದೆ. ಅದರ ಬೆನ್ನ ಹಿಂದೆಯೇ ಜೆಡಿಎಸ್ ಕೂಡ ಪಕ್ಷ ಸಂಘಟನೆ ಹೆಸರಿನಲ್ಲಿ ರಾಜ್ಯ ಪ್ರವಾಸಕ್ಕೆ ಮಹೂರ್ತ ನಿಗದಿ ಮಾಡಿದೆ.
ಜೆಡಿಎಸ್ ಕೋರ್ ಕಮಿಟಿ ಸೆ.26ರಿಂದ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಿದೆ. ಕೋರ್ ಕಮಿಟಿ ಅಧ್ಯಕ್ಷ, ಮಾಜಿ ಸಚಿವ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಕಮಿಟಿಯ ಸದಸ್ಯರು ಪ್ರವಾಸ ಕೈಗೊಂಡು ವಿಭಾಗವಾರು ಸಂಘಟನಾ ಸಭೆ ನಡೆಸಲಿದ್ದಾರೆ.
ಕಲ್ಯಾಣ ಕರ್ನಾಟಕದಿಂದ ಪ್ರವಾಸ ಆರಂಭಿಸಲಿದ್ದು, ಸೆ.26ರಂದು ಕಲಬುರಗಿ ನಗರದಲ್ಲಿ ಕಲಬುರಗಿ ವಿಭಾಗದ ಸಭೆ ನಡೆಸಲಾಗುತ್ತದೆ. ಸೆ.27ರಂದು ಬಳ್ಳಾರಿ ಭಾಗದ ಸಭೆಯನ್ನು ಹೊಸಪೇಟೆಯಲ್ಲಿ ನಡೆಸಲಾಗುತ್ತದೆ. ಈ ಎರಡು ಸಭೆಗಳಲ್ಲಿ ಪಕ್ಷದ ಸಂಘಟನೆ ಹಾಗೂ ಪಕ್ಷದ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.
ಆಯಾ ವಿಭಾಗದ ವ್ಯಾಪ್ತಿಯ ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು, ವಿಧಾನಸಭಾ ಚುನಾವಣೆಯಲ್ಲಿ ಸ್ರ್ಪಧಿಸಿದ್ದ ಅಭ್ಯರ್ಥಿಗಳು, ಜಿಲ್ಲೆ ಹಾಗೂ ತಾಲ್ಲೂಕು ಅಧ್ಯಕ್ಷರು ಸಭೆಗಳಲ್ಲಿ ಭಾಗವಹಿಸಲಿದ್ದಾರೆ.
ಕೋರ್ ಕಮಿಟಿ ಸಭೆ ಬಳಿಕ ಪಕ್ಷದ ಎಲ್ಲ ಹಂತದ ಘಟಕಗಳಿಗೆ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡುವ ಉದ್ದೇಶವೂ ಇದೆ. ಪಕ್ಷ ಸಂಘಟನೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ ಹಾಗೂ ಯುವಕರನ್ನು ಗುರುತಿಸಿ ಸ್ಥಾನ ನೀಡಲೂ ಕೋರ್ ಕಮಿಟಿ ನಿರ್ಧಾರ ತೆಗೆದುಕೊಳ್ಳಲಿದೆ.