ಉಪವಾಸ ಸತ್ಯಾಗ್ರಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ

01 HANUR 1
ಹನೂರಿನಲ್ಲಿ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಅಧ್ಯಕ್ಷ ಮಾದಪ್ಪ ಮಾತನಾಡಿದರು. ಶ್ರೀನಿವಾಸ್, ಅಮೋಘ, ವಿನೇಶ್, ನಂದೀಶ್ ಇತರರು ಇದ್ದರು.
Published on

ಹನೂರು: ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಆ.14 ರಂದು ಜಿಲ್ಲಾಡಳಿತ ಕಚೇರಿ ಮುಂಭಾಗ ಕೈಗೊಂಡಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹಕ್ಕೆ ಹನೂರು ಭಾಗದಿಂದ ಹೆಚ್ಚಿನ ರೈತರು ಭಾಗವಹಿಸುವಂತೆ ತಾಲೂಕು ಅಧ್ಯಕ್ಷ ಮಾದಪ್ಪ ತಿಳಿಸಿದರು.

ಪಟ್ಟಣದ ಪಶುಪಾಲನಾ ಇಲಾಖೆಯ ಸಭಾಂಗಣದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ಸಂಬಂಧ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು. ಹನೂರು ಭಾಗದಲ್ಲಿ ಹೆಚ್ಚಿನ ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಮಾಡುತ್ತಿದ್ದಾರೆ. ಆದರೆ ಈ ಬಾರಿ ಮಳೆಯಾಗದ ಹಿನ್ನೆಲೆಯಲ್ಲಿ ರೈತರು ತುಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ಹನೂರನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ತಾಲೂಕಿನ ಚಂಗಡಿ ಗ್ರಾಮವನ್ನು ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವುದಾಗಿ ಸರ್ಕಾರ ಭರವಸೆ ನೀಡಿ ಮೂರೂವರೆ ವರ್ಷವೇ ಕಳೆದಿದೆ. ಆದರೆ ಈ ಕಾರ್ಯವಾಗಿಲ್ಲ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಗ್ರಾಮಗಳಿಗೆ ಅಗತ್ಯ ಮೂಲ ಸೌಕರ್ಯವಿಲ್ಲ. ಇದರಿಂದ ಜನರು ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಮಾನವ ವನ್ಯಜೀವಿ ಸಂಘರ್ಷ ಹೆಚ್ಚಾಗುತ್ತಿದ್ದು, ಕಡಿವಾಣಕ್ಕೆ ಅರಣ್ಯ ಇಲಾಖೆ ಕ್ರಮವಹಿಸಿಲ್ಲ. ಕಾಡು ಪ್ರಾಣಿಗಳಿಂದಾಗುವ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವಾಗಿಲ್ಲ. ಇದರಿಂದ ರೈತರು ಕೃಷಿಯಲ್ಲಿ ತುಂಬ ತೊಂದರೆ ಅನುಭವಿಸುವಂತಾಗಿದೆ ಎಂದು ತಿಳಿಸಿದರು.

ಸಂಘದ ಪದಾಧಿಕಾರಿಗಳಾದ ಶ್ರೀನಿವಾಸ್, ನಂದೀಶ್, ವಿನೇಶ್, ಅಮೋಘ, ಮಾದಪ್ಪ, ವಿನ್ಸೆಂಟ್, ಪ್ರಕಾಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net