

ಬಟಿಂಡಾ : ರಾಷ್ಟ್ರ ರಾಜಧಾನಿಯಲ್ಲಿ ಜನವರಿ 26 ರಂದು ರೈತಹೋರಾಟದ ಹೆಸರಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಹಲವಾರು ರೈತರು ಈಗ ಪ್ರತಿಭಟನೆಯಿಂದ ಹಿಂದೆ ಸರಿಯುತ್ತಿದ್ದಾರೆ. ಈ ಸಮಯದಲ್ಲಿ ಪ್ರತಿಭಟನೆಗೆ ಜನಹೊಂಚಲು ಪಂಜಾಬಿನ ಗ್ರಾಮ ಮುಖಂಡರು ಹೊಸತೊಂದು ಬಲವಂತದ ಮಾರ್ಗ ಹುಡುಕಿದ್ದಾರೆ.
ಹಳ್ಳಿಯ ಪ್ರತಿ ಮನೆಯಿಂದ ಒಬ್ಬ ಗಂಡಸು ರೈತ ಚಳುವಳಿಯಲ್ಲಿ ಭಾಗವಹಿಸಲು ದೆಹಲಿಗೆ ತೆರಳಬೇಕು, ತಪ್ಪಿದಲ್ಲಿ 500 ರೂಪಾಯಿಯಿಂದ 2100 ರೂಪಾಯಿವರೆಗೆ ದಂಡ ತೆರಬೇಕು! ಕಳೆದೆರಡು ದಿನಗಳಲ್ಲಿ ಪಂಜಾಬಿನ ಮಾಳ್ವಾ ಪ್ರಾಂತ್ಯದ ಐದು ಗ್ರಾಮ ಪಂಚಾಯಿತಿಗಳು ಈ ರೀತಿಯಾಗಿ ಲಿಖಿತ ಮತ್ತು ಮೌಖಿಕ ಆದೇಶಗಳನ್ನು ಜಾರಿ ಮಾಡಿರುವುದು ಬೆಳಕಿಗೆ ಬಂದಿದೆ.
ಬಟಿಂಡಾ ಜಿಲ್ಲೆಯ ಕರಾರ್ವಾಲಾ ಗ್ರಾಮದ ಸರಪಂಚರಾದ ಅವತಾರ್ ಸಿಂಗ್ ಇಡೀ ಹಳ್ಳಿಯ ಜನರು ಈ ರೀತಿಯಾಗಿ ಒಮ್ಮತದ ನಿರ್ಧಾರ ಮಾಡಿದ್ದಾರೆ ಎಂದಿದ್ದಾರೆ. ಪ್ರತಿ ಮನೆಯಿಂದ ಒಬ್ಬರು ಹೋರಾಟಕ್ಕೆ ಹೋಗಬೇಕು. ಯಾರೂ ಹೋಗದಿದ್ದರೆ 2100 ರೂಪಾಯಿ ದಂಡವಾಗಿ ತೆರಬೇಕು. ಹೀಗೆ ಜಮಾಯಿಸಿದ 25 ಜನರ ಮೊದಲನೇ ಜಾಥಾ ದೆಹಲಿ ಗಡಿಗೆ ಶನಿವಾರ ತೆರಳಿದ್ದು, ಒಂದು ವಾರದ ಮಟ್ಟಿಗೆ ಅಲ್ಲಿ ಠಿಕಾಣೆ ಹೂಡಲಿದ್ದಾರೆ. ಮತ್ತೆ ಮುಂದಿನ ವಾರ ಬೇರೆ 25 ಜನರ ಜಾಥಾ ಹೊರಡುತ್ತದೆ ಎಂದಿದ್ದಾರೆ. ಇನ್ನು ಹೋರಾಟದ ವೇಳೆ ಯಾವುದೇ ರೀತಿಯ ತೊಂದರೆ ಉಂಟುಮಾಡುವ ಹಾಗಿಲ್ಲ. ಮದ್ಯಪಾನ ಮಾಡಿ ಸಮಸ್ಯೆ ಉಂಟುಮಾಡಿದರೆ ಅದಕ್ಕೆ ಹೆಚ್ಚಿನ ದಂಡ - 5100 ರೂಪಾಯಿ ತೆರಬೇಕು ಎಂದೂ ನಿರ್ಧರಿಸಲಾಗಿದೆ ಎಂದಿದ್ದಾರೆ.
ಫರೀದ್ಕೋಟ್ ಜಿಲ್ಲೆಯ ಸಿವಿಯನ್ ಎಂಬ ಹಳ್ಳಿಯಲ್ಲಿ ದಂಡದ ಮೊತ್ತ 500 ರೂಪಾಯಿಗೆ ನಿಗದಿಪಡಿಸಲಾಗಿದೆ. ಹಳ್ಳಿಯ ಪ್ರತಿ ಮನೆಯಿಂದ ಒಬ್ಬರು ಹೋರಾಟಕ್ಕೆ ತೆರಳಬೇಕು, ಇಲ್ಲದಿದ್ದರೆ ದಂಡ ಕಟ್ಟಬೇಕು. ಹೀಗೆ ಜಮಾ ಆದ ಹಣವನ್ನು ಪ್ರತಿಭಟನೆಗೆ ಸಂಬಂಧಿಸಿದ ಖರ್ಚಿಗೆ ಬಳಸಬೇಕು ಎಂದು ಹಳ್ಳಿಯವರೆಲ್ಲಾ ಸೇರಿ ತೀರ್ಮಾನ ಮಾಡಿದ್ದೀವಿ ಎನ್ನುತ್ತಾರೆ ಸರ್ಪಂಚ್ ಕರ್ನೈಲ್ ಸಿಂಗ್.
ಬರ್ನಾಲಾ ಜಿಲ್ಲೆಯ ಠಿಕ್ರಿವಾಲ್ ಗ್ರಾಮ, ಮನ್ಸಾದ ಬಾರೆ ಗ್ರಾಮ ಮತ್ತು ಬಟಿಂಡಾದ ನಾತೇಹಾ ಗ್ರಾಮದ ಪಂಚಾಯಿತಿಗಳು ಕೂಡ ಇದೇ ರೀತಿಯಾಗಿ ಆದೇಶ ಮಾಡಿ ತಮ್ಮ ನಿವಾಸಿಗಳನ್ನು ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತಚಳುವಳಿಗೆ ಕಳುಹಿಸುತ್ತಿವೆ ಎನ್ನಲಾಗಿದೆ. (ಏಜೆನ್ಸೀಸ್)