ಶಿಡ್ಲಘಟ್ಟ: ಪಾರ್ಥೇನಿಯಂ ಕಳೆಯ ಗಿಡ ಪರಿಸರದಲ್ಲಿದ್ದರೆ ಬೆಳೆ, ಜಾನುವಾರು ಸೇರಿ ಮನುಷ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಅದರ ನಿರ್ವಹಣೆ ನಮ್ಮೆಲ್ಲರ ಹೊಣೆ ಎಂದು ಜಿಕೆವಿಕೆ ಪ್ರಾಧ್ಯಾಪಕಿ ಡಾ.ಗೀತಾ ತಿಳಿಸಿದರು. ತಾಲೂಕಿನ ಕೊತ್ತನೂರಿನ ಜಿಕೆವಿಕೆ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಎಐಸಿಆರ್ಪಿ ಕಳೆ ನಿರ್ವಹಣೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಪಾರ್ಥೇನಿಯಂ ಜಾಗೃತಿ ಸಪ್ತಾಹದಲ್ಲಿ ಮಾತನಾಡಿ, ಪಾರ್ಥೇನಿಯಂ ಕಳೆ ಹೆಚ್ಚಿನ ಪ್ರಮಾಣದಲ್ಲಿ ಪರಾಗ ಉತ್ಪಾದಿಸುವುದರಿಂದ ವಾತಾವರಣದಲ್ಲಿ ಸೇರಿ ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಮಣ್ಣಿನ ಗುಣಮಟ್ಟ ಹಾನಿ ಮಾಡುವ ಕಳೆ ನಾಶ ಮಾಡುವುದು ಅಗತ್ಯ ಎಂದರು. ಜೂನಿಯರ್ ಅಗ್ರೋನಮಿಸ್ಟ್ ಡಾ.ಕಮಲಾಬಾಯಿ ಮಾತನಾಡಿ, ಪಾರ್ಥೇನಿಯಂ ಗಿಡ ನಿಮೂರ್ಲನೆಗೊಳಿಸಲು ಸಾಮೂಹಿಕವಾಗಿ ಒಂದಾಗಿ ನಿರ್ವಹಣೆ ಮಾಡಬೇಕು. ಪಾರ್ಥೇನಿಯಂ ಇತರ ಕೃಷಿ ತ್ಯಾಜ್ಯ ಬಳಸಿ ಕಾಂಪೋಸ್ಟ್ ತಯಾರಿಸಬಹುದು. ಜೈವಿಕ ಪದ್ಧತಿಯಲ್ಲಿ ಸಸ್ಯ ನಿಯೋಗಿ ಗಿಡಗಳಾದ ಚೆಂಡು ಹೂವು, ಸಂಜೆಮಲ್ಲಿಗೆಯನ್ನು ಬೆಳೆಸಿ ಕಳೆ ನಿರ್ವಹಣೆ ಮಾಡಬಹುದು ಎಂದರು.