

* ನನಗೆ ಬೆನ್ನು ಬಲಗೊಳ್ಳುವ ಪಾರ್ಶ್ವತಾಡಾಸನದ ಬಗ್ಗೆ ತಿಳಿಸಿ.
| ನಾರಾಯಣ ಮಂಗಳೂರು, 42 ವರ್ಷ
- ಇದು ನಿಂತುಕೊಂಡು ಎರಡೂ ಕೈಗಳನ್ನು ಮೇಲೆ ಮಾಡಿ ಪಾರ್ಶ್ವಕ್ಕೆ ಬಾಗುವ ಭಂಗಿಯಾಗಿದೆ.
ವಿಧಾನ: ಜಮಖಾನ ಹಾಸಿದ ನೆಲದ ಮೇಲೆ ಪ್ರಥಮವಾಗಿ ತಾಡಾಸನ ಭಂಗಿಗೆ ಬನ್ನಿ. ನಂತರ ಕಾಲುಗಳಲ್ಲಿ ಎರಡು ಅಡಿಗಳಷ್ಟು ಅಂತರವಿರಿಸಿ. ಆಮೇಲೆ ಎರಡೂ ಕೈಗಳ ಬೆರಳುಗಳನ್ನು ಹೆಣೆದುಕೊಂಡು ಶಿರಸ್ಸಿನ ಮೇಲಕ್ಕೆ ತನ್ನಿ. ಉಸಿರನ್ನು ಒಳಕ್ಕೆ ತೆಗೆದುಕೊಂಡು ಆಮೇಲೆ ಉಸಿರನ್ನು ಬಿಡುತ್ತ ಸೊಂಟದ ಮೇಲ್ಭಾಗದಿಂದ ಬಲಕ್ಕೆ (ಪಾರ್ಶ್ವಕ್ಕೆ) ಅಥವಾ ತೂಗಾಡುವ ಚಲನೆಯ ರೀತಿ ಬಾಗಿಸಿ. ಈ ಸ್ಥಿತಿಯಲ್ಲಿ ಐದು ಸಮ ಉಸಿರಾಟವನ್ನು ನಡೆಸುತ್ತಿದ್ದು ಆಮೇಲೆ ಉಸಿರನ್ನು ತೆಗೆದುಕೊಳ್ಳುತ್ತ ಮೊದಲಿನ ಸ್ಥಿತಿಗೆ ಬನ್ನಿ. ನಂತರ ಉಸಿರನ್ನು ಬಿಡುತ್ತ ಎಡಪಾರ್ಶ್ವಕ್ಕೆ ಭಾಗಿ. ಇಲ್ಲಿ ಐದು ಸಮ ಉಸಿರಾಟ ನಡೆಸಿ. ಈ ರೀತಿ 2-3 ರೀತಿ ಅಭ್ಯಾಸ ಮಾಡಿ. ಈ ಸಂದರ್ಭದಲ್ಲಿ ದೇಹವನ್ನು ಬಿಗಿಗೊಳಿಸದೆ ಹಾಯಾಗಿ ಅಭ್ಯಾಸ ಮಾಡಿ. ಆರಂಭದಲ್ಲಿ ಕಲಿಯುವಾಗ ಸಾಧ್ಯವಾಗುವಷ್ಟೇ ಬಾಗಿ.
ಪ್ರಯೋಜನ: ತುಂಬ ಹೊತ್ತು ಕುಳಿತುಕೊಂಡು ಕೆಲಸ ನಿರ್ವಹಿಸುವರಿಗೆ ಸಹಜವಾಗಿ ಕಾಡುವ ಬೆನ್ನು, ಸೊಂಟನೋವು ಹಾಗೂ ಬಿಗಿತ ಇರುವರಿಗೆ ಈ ಆಸನ ಉಪಯುಕ್ತವಾಗಿದೆ. ಈ ಆಸನದಲ್ಲಿ ಬೆನ್ನು, ಭುಜ ಹಾಗೂ ಕಾಲಿನ ಮಾಂಸಖಂಡಗಳು ಬಲಗೊಳ್ಳುತ್ತವೆ. ಈ ರೀತಿ ತೂಗಾಡುವ ಚಲನೆಯಿಂದ ಒಂದು ರೀತಿ ಹಗುರವಾದ ಭಾವನೆ ಮೂಡುತ್ತದೆ. ದೈಹಿಕ ಮಾನಸಿಕ ಬಿಗುವಿನಿಂದ ಬಿಡುಗಡೆ ಹೊಂದಲು ಈ ಆಸನ ಸಹಕಾರಿ ಮೂಲಾಧಾರ ಮತ್ತು ಮಣಿಪೂರ ಚಕ್ರದ ಸುಸ್ಥಿತಿಗೆ ಸಹಕಾರಿಯಾಗಿದೆ.
* ಪತಂಜಲಿ ಮಹರ್ಷಿಗಳು ತಿಳಿಸಿದ ಯೋಗದ ಪ್ರಮುಖ ವ್ಯಾಖ್ಯಾನವೇನು ?
| ರೋಹಿತ್ ಕಾಸರಗೋಡು, 22 ವರ್ಷ
- ಯೋಗಕ್ಕೆ ಹಲವಾರು ಅರ್ಥಗಳು ಹಾಗೂ ವ್ಯಾಖ್ಯಾನಗಳಿವೆ. ಯೋಗದಿಂದ ದೈಹಿಕ ಆರೋಗ್ಯ, ಚಿತ್ತ ಶಾಂತಿ ದೊರೆತು ಅಧ್ಯಾತ್ಮ ಸಾಧನೆಗೆ ಪೂರಕವಾಗುತ್ತದೆ. ಮಹಾಮುನಿ ಪತಂಜಲಿಯ ಪ್ರಕಾರ ಯೋಗದ ಪ್ರಮುಖ ವ್ಯಾಖ್ಯಾನ: ‘ಯೋಗಃ ಚಿತ್ತ ವೃತ್ತಿ ನಿರೋಧಃ |’ (ಪಾತಂಜಲ ಯೋಗಸೂತ್ರದ ಎರಡನೇ ಅಧ್ಯಾಯ) ಅಂದರೆ ‘ಚಿತ್ತದ ವೃತ್ತಿಗಳನ್ನು (ಬಯಕೆಗಳನ್ನು) ಸಂಪೂರ್ಣ ತಡೆಹಿಡಿದು ನಿಲ್ಲಿಸಿ, ಏಕಾಗ್ರತೆ ಸಾಧಿಸುವುದೇ ಯೋಗ.’
ಮನಸ್ಸಿನಲ್ಲಿ ಬರುವ ಎಲ್ಲ ಯೋಚನೆ, ಕಲ್ಪನೆ, ಭಾವನೆ ಇತ್ಯಾದಿಗಳನ್ನು ಸಂಪೂರ್ಣ ಲಯವಾಗಿಸಿ ಮನಸ್ಸು ಶಾಂತಸ್ಥಿತಿಗೆ ಹೋಗುವುದೇ ಯೋಗ. ಮುಂದೆ ಭಗವಂತನ ದರ್ಶನಕ್ಕೆ ಮನಸ್ಸನ್ನು ಸಿದ್ಧಗೊಳಿಸುವ ಪೂರ್ವಭಾವಿ ಅಭ್ಯಾಸವೇ ಯೋಗದ ಮುಖ್ಯ ಉದ್ದೇಶ. ಮಹರ್ಷಿ ಪತಂಜಲಿಗಳ ಪ್ರಕಾರ ಯೋಗದ ಎಂಟು ಮೆಟ್ಟಲುಗಳೆಂದರೆ - 1) ಯಮ, 2) ನಿಯಮ, 3) ಆಸನ, 4) ಪ್ರಾಣಾಯಾಮ,
5) ಪ್ರತ್ಯಾಹಾರ, 6) ಧಾರಣ, 7) ಧ್ಯಾನ, 8) ಸಮಾಧಿ.