

ನವದೆಹಲಿ: ಇಂದು ಸಂಸತ್ತಿನ ವಿಶೇಷ ಅಧಿವೇಶನದ ಮೂರನೇ ದಿನ. ಸದನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಕುರಿತು ಚರ್ಚೆ ನಡೆಯುತ್ತಿದೆ. ಮಂಗಳವಾರದಿಂದ ಹೊಸ ಸಂಸತ್ತಿನಲ್ಲಿ ಕಲಾಪ ಆರಂಭವಾಯಿತು. ನೂತನ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂಸದರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಇದು ನನ್ನ ಪತಿ ರಾಜೀವ್ ಗಾಂಧಿ ಅವರ ಕನಸು ಎಂದು ಹೇಳಿದ್ದಾರೆ. ಇದು ನನ್ನ ಪತಿಯ ಕನಸು ಎಂದು ಹೇಳಿದ ಸೋನಿಯಾ ಗಾಂಧಿ ನಂತರ ಪಿ.ವಿ.ನರಸಿಂಹರಾವ್ ಅವರ ಸರ್ಕಾರವೇ ಅದನ್ನು ಜಾರಿಗೆ ತಂದಿತ್ತು.
ಇಂದು, ದೇಶಾದ್ಯಂತ ಸ್ಥಳೀಯ ಸಂಸ್ಥೆಗಳ ಮೂಲಕ ಚುನಾಯಿತರಾದ 15 ಲಕ್ಷ ಮಹಿಳಾ ನಾಯಕಿಯರನ್ನು ನಾವು ಹೊಂದಿದ್ದೇವೆ. ರಾಜೀವ್ ಗಾಂಧಿ ಅವರ ಕನಸು ಇದುವರೆಗೆ ಅರ್ಧದಷ್ಟು ಮಾತ್ರ ಈಡೇರಿದೆ ಎಂದು ಹೇಳಿದರು. ಈ ಮಸೂದೆ ಜಾರಿಯಾದ ನಂತರ ಈ ಕನಸು ನನಸಾಗಲಿದೆ ಎಂದು ಸೋನಿಯಾ ತಿಳಿಸಿದರು.
ಇನ್ನು ಈ ಕಾನೂನಿಗೆ ಮಹಿಳೆಯರು ಇನ್ನೂ ಎಷ್ಟು ವರ್ಷ ಕಾಯಬೇಕು ಎಂಬ ಪ್ರಶ್ನೆ ನನಗೂ ಕಾಡುತ್ತಿದೆ ಎಂದ ಅವರು, ಈ ಮಸೂದೆಯನ್ನು ಕೂಡಲೇ ಜಾರಿಗೊಳಿಸಬೇಕು ಆದರೆ ಇದರೊಂದಿಗೆ ಸರ್ಕಾರ ಜಾತಿ ಗಣತಿಯನ್ನೂ ನಡೆಸಬೇಕು. ಎಸ್ಸಿ, ಎಸ್ಟಿ, ಒಬಿಸಿಗೆ ಮೀಸಲಾತಿ ಕಲ್ಪಿಸಬೇಕು ಎಂದರು.