

Parliament protests : ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಯನ್ನು ಖಂಡಿಸಿ, ಸಂಸತ್ತಿನಲ್ಲಿ ವಿಪಕ್ಷಗಳು ಗುರುವಾರ (ಡಿ.19)ವೂ ಪ್ರತಿಭಟನೆ ಮುಂದುವರಿಸಿವೆ. ಇದರ ನಡುವೆ ಬಿಜೆಪಿ ಸಂಸದ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಂಡಿದ್ದು, ಸಂಸತ್ತಿನಲ್ಲಿ ಭಾರಿ ಹೈಡ್ರಾಮಕ್ಕೆ ಕಾರಣವಾಯಿತು.
ಲೋಕಸಭೆಯಲ್ಲಿ ನಾನು ಮೆಟ್ಟಿಲುಗಳ ಬಳಿ ನಿಂತಿದ್ದಾಗ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಬ್ಬ ಸಂಸದರನ್ನು ತಳ್ಳಿದರು, ಅವರು ನನ್ನ ಮೇಲೆ ಬಿದ್ದರು ಎಂದು ಬಿಜೆಪಿ ಸಂಸದ ಸಾರಂಗಿ ಹೇಳಿದ್ದಾರೆ.
ಈ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡಿದ್ದು, ಸದನದ ಒಳಗೆ ಹೋಗಲು ಬಿಜೆಪಿ ಸಂಸದರು ನನಗೆ ಅಡ್ಡಿಪಡಿಸಿದರು. ನಾನು ಪ್ರವೇಶ ದ್ವಾರದ ಬಳಿಯೇ ನಿಂತಿದ್ದೇ ಎಂದು ಸಮರ್ಥಿಸಿಕೊಂಡರು. ಅಲ್ಲದೆ, ಬಿಜೆಪಿಯವರೇ ನನ್ನನ್ನು ತಳ್ಳುತ್ತಿದ್ದರು ಮತ್ತು ಬೆದರಿಕೆ ಹಾಕುತ್ತಿದ್ದರು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ನಾನು ಸಂಸತ್ತಿನ ಪ್ರವೇಶ ದ್ವಾರದ ಮೂಲಕ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ಬಿಜೆಪಿ ಸಂಸದರು ನನ್ನನ್ನು ತಡೆದು ತಳ್ಳಲು ಮತ್ತು ಬೆದರಿಕೆ ಹಾಕಲು ಪ್ರಯತ್ನಿಸುತ್ತಿದ್ದರು. ಹಾಗಾಗಿ ಇದು ಸಂಭವಿಸಿದೆ. ನಾವು ನೂಕುನುಗ್ಗಲಿನಿಂದ ಕುಗ್ಗಲಿಲ್ಲ. ನಮಗೂ ಒಳಗೆ ಹೋಗುವ ಹಕ್ಕಿದೆ. ಬಿಜೆಪಿ ಸಂಸದರು ನಮ್ಮನ್ನು ಒಳಗೆ ಹೋಗದಂತೆ ತಡೆಯಲು ಪ್ರಯತ್ನಿಸುತ್ತಿದ್ದರು. ಅವರು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ ಮತ್ತು ಅಂಬೇಡ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಕಿಡಿಕಾರಿದರು.
ಮಂಗಳವಾರ ರಾಜ್ಯಸಭೆಯಲ್ಲಿ ಭಾಷಣ ಮಾಡಿದ್ದ ಅಮಿತ್ ಷಾ, ‘ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಹೆಸರು ಪಠಿಸುವುದು ಈಗ ವ್ಯಸನ ಆಗಿ ಬಿಟ್ಟಿದೆ. ಅಂಬೇಡ್ಕರ್ ಬದಲು 100 ಬಾರಿ ದೇವರನ್ನು ಜಪಿಸಿದ್ದರೆ ಏಳೇಳು ಜನ್ಮದಲ್ಲೂ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು. ಆದರೆ, ಅಂಬೇಡ್ಕರ್ ಕುರಿತು ನಿಮ್ಮ (ಕಾಂಗ್ರೆಸ್) ಭಾವನೆ ಏನೆಂಬುದನ್ನು ನಾನು ಹೇಳುತ್ತೇನೆ. ನೆಹರು ಅವರ ಮೊದಲ ಸಚಿವ ಸಂಪುಟಕ್ಕೆ ಅಂಬೇಡ್ಕರ್ ಮತ್ತು ರಾಜಾಜಿ ರಾಜೀನಾಮೆ ನೀಡಿದ್ದರು. ಆ ಸಂದರ್ಭದಲ್ಲಿ ಇಬ್ಬರು ದಿಗ್ಗಜರ ರಾಜೀನಾಮೆ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿ.ಸಿ. ರಾಯ್ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ, ರಾಜಾಜಿ ರಾಜೀನಾಮೆ ನೀಡಿದ್ದು ನಮಗೆ ಸ್ವಲ್ಪ ನಷ್ಟ ತರಲಿದೆ. ಆದರೆ, ಅಂಬೇಡ್ಕರ್ ರಾಜೀನಾಮೆಯಿಂದ ಸಂಪುಟ ದುರ್ಬಲ ಆಗುವುದಿಲ್ಲ ಎಂದು ನೆಹರೂ ಪ್ರತಿಕ್ರಿಯಿಸಿದ್ದರು. ಆದರೆ, ಈಗ ಅಂಬೇಡ್ಕರ್ಗೆ ದೊಡ್ಡ ಸಂಖ್ಯೆಯ ಬೆಂಬಲಿಗರು ಇರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿಗರು ವೋಟ್ ಬ್ಯಾಂಕ್ ಕಾರಣಕ್ಕೆ ಅಂಬೇಡ್ಕರ್ ಜಪ ಮಾಡುತ್ತಿದ್ದಾರೆ’ ಎಂದು ಅಮಿತ್ ಷಾ ರಾಜ್ಯಸಭೆಯಲ್ಲಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದರು. ಇದನ್ನು ಬುಧವಾರ ಪ್ರಸ್ತಾಪ ಮಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, ಅಂಬೇಡ್ಕರ್ ಅವರಿಗೆ ಷಾ ಅವಮಾನ ಮಾಡಿದ್ದಾರೆಂದು ಆರೋಪ ಮಾಡಿದರು.
ಷಾ ಸ್ಪಷ್ಟನೆ ಏನು?: ಕಾಂಗ್ರೆಸ್ ನಾನು ಹೇಳಿದ ಸತ್ಯವನ್ನು ತಪ್ಪಾಗಿ ವ್ಯಾಖ್ಯಾನಿಸಿದೆ. ಸಂವಿಧಾನ ವಿರೋಧಿ ಪಕ್ಷವು ತನ್ನ ಟೀಕೆಗಳನ್ನು ತಪ್ಪಾಗಿ ಪಸ್ತುತಪಡಿಸುತ್ತಿದೆ. ನನ್ನ ವಿರುದ್ಧ ಸಮಾಜದಲ್ಲಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಅಮಿತ್ ಷಾ ಬುಧವಾರ ಸ್ಪಷ್ಟನೆ ನೀಡಿದ್ದಾರೆ.