

ಬೆಂಗಳೂರು: ಕೋಟಾ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಕಾರಣದಿಂದ ತೆರವಾಗಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸ್ಥಾನದ ಉಪ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಪ್ರಕಟಿಸಿದೆ.
ರಾಜು ಪೂಜಾರಿ ಬೈಂದೂರು ಅವರಿಗೆ ಟಿಕೆಟ್ ನೀಡಿ ಎಐಸಿಸಿ ಕಾರ್ಯದರ್ಶಿ ವೇಣುಗೋಪಾಲ್ ಅವರು ಅಧಿಕೃತ ಘೋಷಣೆ ಮಾಡಿದ್ದಾರೆ. ಈಗಾಗಲೇ ಬಿಜೆಪಿ ಸಹ ತನ್ನ ಅಭ್ಯರ್ಥಿಯನ್ನು ಕಿಶೋರ್ ಕುಮಾರ್ ಪುತ್ತೂರ್ಗೆ ಟಿಕೆಟ್ ನೀಡಿತ್ತು.
ವಿಧಾನ ಪರಿಷತ್ ಒಂದು ಸ್ಥಾನಕ್ಕೆ ಉಪಚುನಾವಣೆಗಾಗಿ ಸೆ.26ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಅಕ್ಟೋಬರ್ 3 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಅ.4ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಇನ್ನೂ ಅ.7ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕವಾಗಿದೆ. ಇನ್ನೂ ಅ.21 ರಂದು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ಮತದಾನ ನಡೆಯಲಿದೆ. ಈ ಬಳಿಕ ಅಕ್ಟೋಬರ್ 24ರಂದು ಮತಎಣಿಕೆ ನಡೆಯಲಿದ್ದು ಫಲಿತಾಂಶ ಪ್ರಕಟವಾಗಲಿದೆ.