

ಮಡಿಕೇರಿ:
ಗಣಪತಿ ಹಬ್ಬದ ಸಂಭ್ರಮ ಶುರುವಾಗಲು ಇನ್ನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ಈ ಮಧ್ಯೆ ಪರಿಸರ ಸ್ನೇಹಿ ಹಬ್ಬಾಚರಣೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳು ಭರದಿಂದ ನಡೆಯುತ್ತಿದ್ದು, ಸರ್ಕಾರ ಕೂಡ ಈ ನಿಟ್ಟಿನಲ್ಲಿ ಪೂರಕ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ ಪರಿಸರಕ್ಕೆ ಧಕ್ಕೆ ಆಗದಂತೆ ಹಬ್ಬಾಚರಣೆ ಕಷ್ಟವೇನಲ್ಲ ಎನ್ನುತ್ತಾರೆ ಪರಿಸರಪ್ರಿಯರು.
ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸಲಾಗುವ ಗಣೇಶ ಚತುರ್ಥಿ ಗಣೇಶನ ಹುಟ್ಟಿದ ದಿನ ಎಂದು ನಂಬುತ್ತಾರೆ ಆಸ್ತಿಕರು. ಮನೆ ಮನೆಗಳಿಗೆ ಸೀಮಿತವಾಗಿದ್ದ ಈ ಹಬ್ಬ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಾರ್ವತ್ರಿಕ ಆಚರಣೆಯ ರೂಪ ಪಡೆದುಕೊಂಡಿತು. ಒಂದರಿಂದ ಹಲವು ದಿನಗಳ ಕಾಲ ಆಚರಿಸಲಾಗುವ ಈ ಹಬ್ಬದ ಸಂದರ್ಭ ವಿವಿಧ ಪ್ರಕಾರದ, ಬಗೆ ಬಗೆಯ ಆಕಾರದ ಆಕರ್ಷಕ ವೈವಿಧ್ಯಮಯ ಗಣೇಶನ ಮೂರ್ತಿಗಳನ್ನು ಕೆರೆ ಅಥವಾ ಜೇಡಿಮಣ್ಣಿನಿಂದ ತಯಾರಿಸಿ ಎಲೆ, ಹೂವು, ಬಾಳೆ ಕಂಬದಿಂದ ಅಲಂಕೃತವಾದ ಮಂಟಪದಲ್ಲಿ ಕುಳ್ಳಿರಿಸಿ ಮೋದಕ, ಕಡುಬು ಮತ್ತಿತರ ತಿನಿಸುಗಳನ್ನು ಅರ್ಪಿಸಿ ಭಕ್ತಿಭಾವದಿಂದ ಪೂಜಿಸುವ ಪರಿಪಾಠ ಈ ಹಿಂದೆ ಇತ್ತು. ಆದರೆ ಆಧುನಿಕ ಕಾಲಘಟ್ಟದಲ್ಲಿ ಹಬ್ಬದ ಆಚರಣೆಯ ಪರಿಭಾಷೆಯೇ ಬದಲಾಗಿದ್ದು ವಿಜೃಂಭಣೆಯ ಹೆಸರಲ್ಲಿ ಎಲ್ಲೆ ಮೀರುತ್ತಿರುವ ಆರೋಪ ವ್ಯಕ್ತವಾಗುತ್ತಿದೆ.
ಕೆರೆ ಮಣ್ಣು, ಜೇಡಿ ಮಣ್ಣು ಬಳಸಿ ತಯಾರಿಸುತ್ತಿದ್ದ ಪರಿಸರಕ್ಕೆ ಪೂರಕ ಗಣಪತಿಯ ಜಾಗಕ್ಕೆ ಈಗ ಅಪಾಯಕಾರಿ ಪ್ಲಾಸ್ಟರ್ ಆಫ್ ಪ್ಯಾರೀಸ್‌ನಿಂದ ತಯಾರಿಸಲಾಗುವ ಮೂರ್ತಿಗಳು ಬಂದಿವೆ. ಪ್ರಾಕೃತಿಕ ಬಣ್ಣಗಳನ್ನು ಬಳಸುತ್ತಿದ್ದಲ್ಲಿ ರಾಸಾಯನಿಕ ಬಣ್ಣಗಳ ಉಪಯೋಗ ಆಗುತ್ತಿದೆ. ಗಣಪತಿ ಮೂರ್ತಿ, ಪೆಂಡಾಲ್ ಅಲಂಕಾರಕ್ಕೆ ಪ್ಲಾಸ್ಟಿಕ್, ಥರ್ಮೊಕೋಲ್, ಸುಲಭವಾಗಿ ಕರಗದ ಅಲಂಕಾರಿಕ ವಸ್ತುಗಳ ಬಳಕೆ ಜಾಸ್ತಿ ಆಗಿದೆ. ಮನೋರಂಜನೆ ಎಂದುಕೊಂಡು ನಡೆಯುವ ಸಂಗೀತ ಕಾರ್ಯಕ್ರಮಗಳಲ್ಲಿ ಅಬ್ಬರದ ಶಬ್ದ ಬಳಕೆ, ಅತಿಯಾದ ಸುಡು ಮದ್ದುಗಳ ಉಪಯೋಗವೂ ಗಣೇಶ ಹಬ್ಬ ಆಚರಣೆಯ ದಿಕ್ಕು ಬದಲಿಸಿದ್ದು ದೊಡ್ಡ ಪ್ರಮಾಣದಲ್ಲಿ ಮಾಲಿನ್ಯಕ್ಕೆ ಕಾರಣವಾಗುತ್ತಿದೆ.
ಅಮೂಲ್ಯ ಜಲಮೂಲದ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಬ್ಬದ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪಾರೀಸ್‌ನಿಂದ ಮಾಡಿರುವ ಗಣೇಶ ಮೂರ್ತಿ ಬಳಕೆ ವಿರುದ್ಧ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿದೆ. ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳು ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಾ ಬಂದಿವೆ. ಆದರೆ ಪಿಒಪಿ ಗಣಪತಿ ಮೂರ್ತಿ ಬಳಕೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಇಳಿಕೆ ಕಂಡು ಬರುತ್ತಿಲ್ಲ. ಹಬ್ಬಕ್ಕೆ ಇನ್ನು ಒಂದು ತಿಂಗಳು ಇರುವಂತೆಯೇ ವಿವಿಧ ಗಾತ್ರದ, ಬಗೆ ಬಗೆಯ ಅವತಾರಗಳ ಗಣೇಶನ ವಿಗ್ರಹಗಳು ಮಾರುಕಟ್ಟೆಗೆ ಬಂದುಬಿಡುತ್ತದೆ.
ಪರಿಸರ ಪೂರಕ ಗಣೇಶೋತ್ಸವ ಆಚರಣೆಗೆ ಈ ಬಾರಿ ರಾಜ್ಯ ಸರ್ಕಾರ ಹೆಚ್ಚು ಮುತುವರ್ಜಿ ತೋರಿಸಿದೆ. ಪರಿಸರಕ್ಕೆ ಹಾನಿಯಾಗದಂತೆ ಹಬ್ಬ ಆಚರಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಖುದ್ದು ಕಾಳಜಿ ವಹಿಸಿದ್ದಾರೆ. ಈ ಬಗ್ಗೆ ನಿಗಾ ಇಡಲು ಸ್ಥಳೀಯ ಆಡಳಿತಗಳಿಗೆ ಸೂಚಿಸಲಾಗಿದೆ. ಗಣಪತಿ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆ ತನಕವೂ ಪರಿಸರಕ್ಕೆ ಪೂರಕವಾಗಿ ಹಬ್ಬಾಚರಣೆ ಮಾಡುವ ಬಗ್ಗೆ ಸಾರ್ವಜನಿಕರಿಗೂ ಮನವಿ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಪ್ರಚಾರ ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳಲಾಗುತ್ತಿದೆ.
’ಪರಿಸರಸ್ನೇಹಿ ಮಣ್ಣಿನ ಗಣೇಶ ವಿಗ್ರಹ ಸ್ಥಾಪಿಸೋಣ- ಜಲಮೂಲಗಳನ್ನು ಉಳಿಸೋಣ’ ಎನ್ನುವ ಘೋಷ ವಾಕ್ಯದಡಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಂದಾಳತ್ವದಲ್ಲಿ ಜನಸಾಮಾನ್ಯರಿಗೆ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಗಳು ಹಂತ ಹಂತವಾಗಿ ಯಶಸ್ವಿಯಾಗುತ್ತಿದ್ದು, ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ಬಳಕೆ ಕಡೆಗೆ ಜನಸಾಮಾನ್ಯರ ಒಲವು ಕಂಡು ಬರುತ್ತಿದೆ. ವಿಜ್ಞಾನ ಪರಿಷತ್‌ನ ಈ ಕಾರ್ಯಕ್ಕೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜೆಸಿಐ ನಂತಹ ಸಾಮಾಜಿಕ ಸಂಘಟನೆಗಳು ಹಾಗೂ ಶಾಲಾ ಕಾಲೇಜುಗಳ ಇಕೋ ಕ್ಲಬ್‌ಗಳೂ ಕೈಜೋಡಿಸುತ್ತಿವೆ.
ಗಣೇಶ ಚತುರ್ಥಿ ಆಗಮನದ ಜತೆಯಲ್ಲೇ ಪರಿಸರದ ಕಾಳಜಿ ಪಸರಿಸುವ ಮಹತ್ವದ ಕೆಲಸ ಭರದಿಂದ ನಡೆಯುತ್ತಿದ್ದು, ಎಲ್ಲಾ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಹಾಗೂ ಹಳ್ಳಿ ಹಳ್ಳಿಗಳಲ್ಲೂ ವಿವಿಧ ರೀತಿಯಲ್ಲಿ ಪರಿಸರ ಜಾಗತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಪಸ್ತುತ ದಿನಗಳಲ್ಲಿ ಪ್ರಭಾವಿಯಾಗಿರುವ ಸಾಮಾಜಿಕ ಜಾಲತಾಣಗಳ ಮೂಲಕ ಯುವಜನತೆಯನ್ನು ಮುಟ್ಟುವ ಪ್ರಯತ್ನಕ್ಕೂ ವಿಜ್ಞಾನ ಪರಿಷತ್ ಕೈ ಹಾಕಿದೆ. ಪಿಒಪಿಯಿಂದ ಮಾಡಿದ ಗಣೇಶ ವಿಗ್ರಹ ಬಳಸುವದರಿಂದ ಪರಿಸರದ ಮೇಲೆ ಆಗುವ ಹಾನಿ ಮತ್ತು ಮಣ್ಣಿನಿಂದ ತಯಾರಿಸಿದ ಗಣಪತಿ ಉಪಯೋಗಿಸುವುದರಿಂದ ಆಗುವ ಲಾಭದ ಬಗ್ಗೆ ಪರಿಣಾಮಕಾರಿಯಾಗಿ ಅರಿವು ಮೂಡಿಸುವ ಕೆಲಸ ನಡೆದಿದೆ.
ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್, ಸೀಸದಂತಹ ವಿಷಕಾರಿ ಹಾಗೂ ರಾಸಾಯನಿಕ ಬಣ್ಣಲೇಪಿತ ಗಣೇಶ ವಿಗ್ರಹಗಳನ್ನು ಸ್ಥಾಪಿಸಿ ನಂತರ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ಸರ್ಕಾರ ನಿಷೇಧಿಸಿದೆ. ಇಂತಹ ಗಣೇಶ ವಿಗ್ರಹಗಳನ್ನು ತಯಾರಿಸುವುದು, ಮಾರಾಟ ಮಾಡುವುದರ ವಿರುದ್ಧವೂ ಜನಜಾಗತಿ ಮೂಡಿಸಲಾಗುತ್ತಿದೆ. ಈ ಬಗ್ಗೆ ಸ್ಥಳೀಯ ಸಂಸ್ಥೆಗಳಾದ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಮೂಲಕ ಸೂಚನೆ ನೀಡುವ ಕೆಲಸ ಮಾಡಲಾಗುತ್ತಿದೆ. ವಿಗ್ರಹ ವ್ಯಾಪಾರಸ್ಥರನ್ನೂ ಸಂಪರ್ಕಿಸಿ, ಸೀಸಲೇಪಿತ ರಾಸಾಯನಿಕ ಬಣ್ಣದಿಂದ ಕೂಡಿದ ಮತ್ತು ಪಿಒಪಿ ಗಣೇಶ ವಿಗ್ರಹಗಳ ಬದಲಿಗೆ ನೈಸರ್ಗಿಕವಾಗಿ ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳನ್ನು ಮಾರಾಟ ಮಾಡುವಂತೆ ಮನವೊಲಿಸುವ ಕೆಲಸವನ್ನೂ ನಡೆಸಲಾಗುತ್ತಿದೆ.
ಪರಿಸರಕ್ಕೆ ಪೂರಕ ಗಣೇಶೋತ್ಸವ