ಭಾರತದ 2036ರ ಒಲಿಂಪಿಕ್ಸ್ ಆತಿಥ್ಯಕ್ಕೆ ನೀತಾ ಅಂಬಾನಿ ಇನ್ಫ್ಲುಯೆನ್ಸಿಲ್​​ ಅಂಬಾಸಿಡರ್​!

Nita Ambani
Published on

ನವದೆಹಲಿ: ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಒಲಿಂಪಿಕ್​ ಸಮಿತಿಯ ಭಾರತದ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾದ ರಿಲಯನ್ಸ್ ಫೌಂಡೇಶನ್‌ ಸಂಸ್ಥಾಪಕಿ ಶ್ರೀಮತಿ ನೀತಾ ಅಂಬಾನಿ ಅವರು ಭಾರತದ 2036ರ  ಒಲಿಂಪಿಕ್ಸ್​ ಆತಿಥ್ಯಕ್ಕೆ ಇನ್ಫ್ಲುಯೆನ್ಸಿಲ್​​ ಅಂಬಾಸಿಡರ್​ (ಪ್ರಭಾವಿ ರಾಯಭಾರಿ) ಆಗಿರಲಿದ್ದಾರೆ. ಈ ಮೂಲಕ ಒಲಿಂಪಿಕ್ಸ್​ ಆಯೋಜಿಸುವ ಭಾರತದ ಯತ್ನಕ್ಕೆ ಕೈಜೋಡಿಸಿದ್ದಾರೆ.

ನೀತಾ ಅಂಬಾನಿ ಅವರಿಗೆ ಕ್ರೀಡೆಯ ಮೇಲೆ ಹೆಚ್ಚು ಒಲವಿರುವುದು ಎಲ್ಲರಿಗೂ ತಿಳಿದೇ ಇದೆ. ಪ್ಯಾರಿಸ್ ಒಲಿಂಪಿಕ್ಸ್‌ ಅದ್ಧೂರಿಯಾಗಿ ಉದ್ಘಾಟನೆಯಾದ ಒಂದು ದಿನದ ಬೆನ್ನಲ್ಲೇ ಭಾರತವು ಮೊದಲ ಬಾರಿಗೆ ‘ಇಂಡಿಯಾ ಹೌಸ್’ ಅನ್ನು ಪ್ಯಾರಿಸ್‌ನಲ್ಲಿ ಉದ್ಘಾಟಿಸಿತು. ಇದನ್ನು ಸ್ವತಃ ನೀತಾ ಅಂಬಾನಿ ಅವರೇ ಉದ್ಘಾಟನೆ ಮಾಡಿದರು. ಇಂಡಿಯಾ ಹೌಸ್ ಅನ್ನು ರಿಲಯನ್ಸ್ ಫೌಂಡೇಶನ್ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಸಹಭಾಗಿತ್ವದಲ್ಲಿ ಪ್ಯಾರಿಸ್​ನ ಪಾರ್ಕ್ ಡೆ ಲಾ ವಿಲೆಟ್​ದಲ್ಲಿ ಸ್ಥಾಪಿಸಲಾಗಿದೆ. ಈ ಮೂಲಕ ನೀತಾ ಅಂಬಾನಿ ಅವರು ಕ್ರೀಡೆಗೆ ಉತ್ತೇಜನ ನೀಡುತ್ತಿದ್ದಾರೆ.

ಅಂದಹಾಗೆ ಇತ್ತೀಚಿನ ವಾರಗಳಲ್ಲಿ ನೀತಾ ಅಂಬಾನಿ ಅವರು ಪ್ರಪಂಚದಾದ್ಯಂತದ ಸೆಲೆಬ್ರಿಟಿ ಪತ್ರಿಕೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಕಾರಣ ಮಗನ ಅದ್ಧೂರಿ ಮದುವೆ ಎಂಬುದು ಎಲ್ಲರಿಗೂ ತಿಳಿದಿದೆ. ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಅವರ ಹೆಮ್ಮೆಯ ತಾಯಿಯಾಗಿದ್ದು, ಅವರ ಅದ್ದೂರಿ ವಿವಾಹ ಇದೇ ತಿಂಗಳ ಆರಂಭದಲ್ಲಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಜಸ್ಟಿನ್ ಬೈಬರ್, ರಿಹಾನ್ನಾ, ಟೋನಿ ಬ್ಲೇರ್, ಬೋರಿಸ್ ಜಾನ್ಸನ್ ಮತ್ತು ಬಾಲಿವುಡ್ ಗಣ್ಯರ ಖಾಸಗಿ ಸಂಗೀತ ಕಚೇರಿಗಳೊಂದಿಗೆ ನಾಲ್ಕು ತಿಂಗಳ ಕಾಲ ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು. ಈ ಮದುವೆಗೆ ಸುಮಾರು 500 ಮಿಲಿಯನ್ ಯುರೋಗಳಿಗಿಂತ ಹೆಚ್ಚು ವೆಚ್ಚವಾಗಿದೆ ಎಂದು ಹೇಳಲಾಗುತ್ತದೆ.

ಇನ್ನೂ ಮುಕೇಶ್​ ಅಂಬಾನಿ ಅವರ ಪತ್ನಿ ನೀತಾ ಅಂಬಾನಿ ಅವರು ಇಡೀ ಒಲಿಂಪಿಕ್ ಮುಗಿಯುವವರೆಗೂ ಹದಿನೈದು ದಿನಗಳವರೆಗೆ ಪ್ಯಾರಿಸ್‌ನಲ್ಲಿ ಇರಲಿದ್ದಾರೆ. ನೀತಾ ಅಂಬಾನಿ ಅವರು 2016ರಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸದಸ್ಯರಾಗಿದ್ದಾರೆ. ಇದೀಗ ಮರು-ಚುನಾಯಿತರಾಗಿದ್ದು, ತಾವು ಅಧ್ಯಕ್ಷರಾಗಿರುವ ರಿಲಯನ್ಸ್ ಫೌಂಡೇಶನ್, ಪ್ಯಾರೀಸ್​ನಲ್ಲಿರುವ ಇಂಡಿಯಾ ಹೌಸ್​ಗೆ ಆರ್ಥಿಕವಾಗಿ ಬೆಂಬಲವಾಗಿ ನಿಂತಿದೆ. ಈ ಇಂಡಿಯಾ ಹೌಸ್​ ಒಲಿಂಪಿಕ್ ಇತಿಹಾಸದಲ್ಲಿ ಮೊದಲನೆಯದು.

ಭಾರತೀಯ ಕರಕುಶಲ ವಸ್ತುಗಳು, ಸಂಗೀತ, ಆಹಾರ ಮತ್ತು ಆಟಗಳ ಈ ಪ್ರದರ್ಶನದಲ್ಲಿ ನೀತಾ ಅಂಬಾನಿ ಭಾಗವಹಿಸಿದ್ದರು. ಈ ವೇಳೆ ಅವರು ಗುಲಾಬಿ ಬಣ್ಣದ ಫ್ಲೋರಲ್ ಪ್ರಿಂಟ್ ಸೀರೆಯನ್ನು ಧರಿಸಿದ್ದರು. ಇದೇ ಸಂದರ್ಭದಲ್ಲಿ ಲೆ ಫಿಗರೊ ಹೆಸರಿನ ಪ್ರಸಿದ್ಧ ಫ್ರೆಂಚ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೀತಾ ಅಂಬಾನಿ ಅವರು, ನಾನು ಅಥೆನ್ಸ್-2004 ರಿಂದ ಒಲಿಂಪಿಕ್ ಕ್ರೀಡಾಕೂಟವನ್ನು ತಪ್ಪಿಸಿಲ್ಲ ಎಂದರು. ಶುಕ್ರವಾರ ಸಂಜೆ ನಡೆದ ಸಮಾರಂಭದಲ್ಲಿ ತನ್ನ ಪತಿ ಮತ್ತು ಐಒಸಿ ಸ್ನೇಹಿತರ ಜತೆ ಪಾಲ್ಗೊಂಡರು. ಕ್ರೀಡಾಪಟುಗಳು ದೋಣಿ ಮೆರವಣಿಗೆಯನ್ನು ಇಷ್ಟಪಟ್ಟರು. ಲೇಡಿ ಗಾಗಾ ಹಾಡನ್ನು ಆನಂದಿಸಿದರು. ಥಾಮಸ್ ಜಾಲಿ ಅವರ ಪ್ರದರ್ಶನವು ಭಾರತದಲ್ಲಿ ಒಲಿಂಪಿಕ್ ಸಮಾರಂಭಕ್ಕೆ ಸ್ಫೂರ್ತಿ ನೀಡಬಹುದೇ ಎಂದು ಕೇಳಿದಾಗ, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸಲು ಬಯಸುವುದಾಗಿ ನೀತಾ ಅಂಬಾನಿ ಉತ್ತರಿಸಿದರು.

ಒಲಿಂಪಿಕ್ಸ್ ವಿಷಯದಲ್ಲಿ ಭಾರತವು ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿದೆ. ಕತಾರ್ ಮತ್ತು ಇತರ ಉದಯೋನ್ಮುಖ ರಾಷ್ಟ್ರಗಳ ನಾಯಕರಂತೆ, ನರೇಂದ್ರ ಮೋದಿ ಕೂಡ ಕ್ರೀಡೆಯ ಶಕ್ತಿಯನ್ನು ಅರ್ಥಮಾಡಿಕೊಂಡಿದ್ದಾರೆ. 2036ರ ಒಲಿಂಪಿಕ್ಸ್ ಗುಜರಾತ್​ನ ರಾಜಧಾನಿ ಮತ್ತು ಅಂಬಾನಿ ಕುಟುಂಬದ ತವರು ಅಹಮದಾಬಾದ್​ನಲ್ಲಿ ನಡೆಯಲಿದೆಯೇ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಆದರೆ, ಸತತ ಮೂರನೇ ಬಾರಿಗೆ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು 2036ರ ಅತಿಥೇಯ ಓಟದಲ್ಲಿ ಭಾಗವಹಿಸಲು ಇಚ್ಛಿಸುವುದಾಗಿ ನೀತಾ ಅಂಬಾನಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net