

ಬೆಂಗಳೂರು: ಗರ್ಭಿಣಿಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ಆಕೆಯ ಪಾಲಕರೇ 50 ಸಾವಿರ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಹೆಚ್ಚಿನ ಹಣದ ಆಸೆಗೆ ಬಿದ್ದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಗುಜರಾತ್ನ ವಡೋದರ ಜಿಲ್ಲೆಯ ಶಿನೋರ್ ತಾಲೂಕಿನಲ್ಲಿ ವಾಸವಾಗಿದ್ದ ವಿಕಾಸ್ ವಾಸವ ಎಂಬುವನ ಜತೆಯಲ್ಲಿದ್ದ ಬಾಲಕಿ ಗರ್ಭಿಣಿಯಾಗಿದ್ದಾಳೆ. ಇದು ತಿಳಿಯುತ್ತಿದ್ದಂತೆ ಆತನ ಬಳಿಗೆ ತೆರಳಿದ ಪಾಲಕರು 50 ಸಾವಿರ ರೂ.ಗಳ ವಹಿವಾಟು ಕುದುರಿಸಿದ್ದಾರೆ. ಹಣ ಪಡೆದು 17 ವರ್ಷದ ಆತನ ವಶಕ್ಕೆ ನೀಡಿದ್ದಾರೆ.
ಈ ವಿಷಯ ಬಾಲಕಿಗೂ ತಿಳಿದಿತ್ತು. ಆದರೆ, ಆತನೊಂದಿಗೆ ಲಿವ್-ಇನ್ ಸಂಬಂಧ ಬೆಳೆಸಿದ್ದ ಬಾಲಕಿ, ತಾನು ಸಂತೋಷವಾಗಿದ್ದ ಕಾರಣ ಪಾಲಕರ ದುಡ್ಡಿನ ವಹಿವಾಟು ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರಲಿಲ್ಲ.
ಇದಾದ ಬಳಿಕ ಪ್ರಕರಣ ತಿರುವು ಪಡೆದಿದೆ. ಬಾಲಕಿಯ ಸಂಬಂಧಿಯೊಬ್ಬ 50 ಸಾವಿರ ರೂ. ಕಡಿಮೆ ಮೊತ್ತವಾಯ್ತು, ಆಕೆ ಅಪ್ರಾಪ್ತಳಾಗಿರುವುದರಿಂದ 5 ಲಕ್ಷ ರೂ. ಕೇಳಬೇಕಿತ್ತು ಎಂದು ಹೇಳಿದ್ದಾನೆ.
ಇದರಿಂದ ಆಸೆಗೆ ಬಿದ್ದ ಬಾಲಕಿಯ ಅಪ್ಪ ಮತ್ತಷ್ಟು ಹಣ ಕೊಡುವಂತೆ ವಿಕಾಸ್ನನ್ನು ಪೀಡಿಸಿದ್ದಾನೆ. ಆದರೆ ದಿನಗೂಲಿಯಾಗಿದ್ದ ಆತ ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಿದ್ದಾನೆ. ಒತ್ತಡ ಹೆಚ್ಚಿದಾಗ ಬಾಲಕಿಯನ್ನು ಆಕೆಯ ಪಾಲಕರಲ್ಲಿಗೆ ಕಳುಹಿಸಿದ್ದಾನೆ.
ಇದೀಗ ಬಾಲಕಿಯು ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಇಬ್ಬರನ್ನೂ ವಶಕ್ಕೆ ಪಡೆದಿರುವ ಪೊಲೀಸರು ಕ್ವಾರಂಟೈನ್ ಕೇಂದ್ರಕ್ಕೆ ಕಳುಹಿಸಿದ್ದಾರೆ.